ಮಂಗಳೂರು: ಕಾಮಗಾರಿಯೊಂದರ ಬಿಲ್ ಮಂಜೂರಾತಿ ಮಾಡಲೆಂದು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆಡಿದೆ. ಬೆಳ್ತಂಗಡಿಯ ಪರಿಶಿಷ್ಟ ಜಾತಿ ಮೆಟ್ರಿಕ್ ಬಳಿಕದ ಬಾಲಕರ ವಿದ್ಯಾರ್ಥಿ ನಿಲಯದ ಡಾರ್ಮಿಟರ್ ಹಾಲ್ ರಚನೆಯ ಟೆಂಡರ್ ಕಾಮಗಾರಿಯ ಬಿಲ್ ಮಂಜೂರಾತಿಗೆ ದ.ಕ.ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರೆ ಕುಮಾರಿ ರೂಪಾ 10 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಫೆ.20 ರಂದು ಆರೋಪಿತೆ 8,000 ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಸ್ಥಳದಲ್ಲಿಯೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ತಕ್ಷಣ ಆರೋಪಿತೆ ಕುಮಾರಿ ರೂಪಾರನ್ನು ದಸ್ತಗಿರಿ ಮಾಡಿರುವ ಲೋಕಾಯುಕ್ತ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.