ಮಂಗಳೂರು : ಶೆಡ್ ಕುಸಿದು ಬಿದ್ದು 10 ಮಂದಿ ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದೆ.
ನಿನ್ನೆ ತಡ ರಾತ್ರಿ 11.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಈ ಸಂದರ್ಭ ಕೂಲಿ ಕಾರ್ಮಿಕರು ಶೆಡ್ ನಲ್ಲಿ ಮಲಗಿದ್ದರು ಎನ್ನಲಾಗಿದೆ. ಏಕಾಏಕಿ ಶೆಡ್ ನ ತಳ ಭಾಗ ಕುಸಿದು ಬಿದ್ದ ಕಾರಣ ಈ ಅನಾಹುತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಬಿಡುಗಡೆ ಮಾಡಲಾಗಿದೆ. ದುರ್ಘಟನೆಗೆ ಕಟ್ಟಡ ಕಾಮಾಗಾರಿ ಮಾಡುತ್ತಿರುವವರ ಬೇಜಾಬ್ದಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಸ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ಮಲಗಿದ್ದ ಶೆಡ್ ಗಳ ಅಡಿ ಭಾಗದಲ್ಲಿ ಸುಮಾರು 30 ಅಡಿಗಳಷ್ಟು ಆಳ ಮಣ್ಣನ್ನು ತೆಗೆಯಲಾಗಿದ್ದು ಈ ಸಂದರ್ಭ ಮೇಲ್ಭಾಗದಲ್ಲಿದ್ದ ಶೆಡ್ ಗಳ ಅಡಿ ಭಾಗ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶತ್ ಯಾವುದೇ ಪ್ರಾಣಾಪಾಯ ವಾಗಿಲ್ಲ, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.