ಮಂಗಳೂರು : ಹಾರ್ಡ್‌ವೇರ್ ಅಂಗಡಿಯಿಂದ ವಸ್ತುಗಳನ್ನು ಪಡೆದು ಹಣ ಪಾವತಿಸದೆ 12.70 ಲಕ್ಷ ರೂ. ವಂಚಿಸಿರುವುದಾಗಿ ಆರೋಪಿಸಿ ಎರಡು ಅಂಗಡಿಗಳ ಮಾಲಕರ ವಿರುದ್ದ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ. ಪ್ರಕರಣದಲ್ಲಿ ನಗರದ ಅಝೀಝುದ್ದೀನ್ ರಸ್ತೆಯಲ್ಲಿರುವ ಬಾಲಾಜಿ ಹಾರ್ಡ್‌ವೇರ್‌ನ ಮಾಲಕ ವಿಕ್ರಮ್ ಪಿ. ಮಾಲಿ ಎಂಬವರು, ವಿಠಲ್ ಕುಲಾಲ್ ಕೊಣಾಜೆ ಮತ್ತು ವಿನುತಾ ಬಿ. ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಠಲ್ ಕುಲಾಲ್ ಕೊಣಾಜೆ ಮನಿಸ್ಕ್ ಎಂಟರ್ ಪ್ರೈಸಸ್ ಹಾಗೂ ವಿನುತಾ ಬಿ.ವಿ.ಕೆ. ಸೋಫಾ ಮೇಕರ್ಸ್ ನ ಮಾಲಕರಾಗಿದ್ದು, ಕಳೆದ ಸುಮಾರು ವರ್ಷಗಳಿಂದ ವಿಕ್ರಮ್ ಪಿ ಮಾಲಿ ಅವರ ಗ್ರಾಹಕರಾಗಿದ್ದಾರೆ. ಇವರು ಸಾಲದ ರೂಪದಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದು, ನಂತರ ಚೆಕ್ ಮುಖಾಂತರ ಹಣ ಪಾವತಿಸುತ್ತಿದ್ದರು. ವಿಕ್ರಮ್ ಅವರು ಆರೋಪಿತರ ಮನಿಸ್ಕ್ ಎಂಟರ್ಪ್ರೈಸಸ್ 2019ರಿಂದ 31-03-2023 ರವರೆಗೆ 40,93,570.43 ರೂ ಹಾಗೂ ಬಿ.ವಿ.ಕೆ. ಸೋಫಾ ಮೇಕರ್ಸ್ ಗೆ 16-04-2018 ರಿಂದ 19-03-2023 ರ ವರೆಗೆ 3,98,058 ರೂ. ಗಳ ವಸ್ತುಗಳನ್ನು ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ದೂರುದಾರರಿಗೆ ಮನಿಸ್ಕ್ ಎಂಟರ್ ಪ್ರೈಸಸ್ ನಿಂದ 12,28, 032ರೂ ಹಾಗೂ42,877 ರೂ. ಬರಲು ಬಾಕಿ ಇದ್ದು, ವಿಕ್ರಮ್ ಈ ಬಗ್ಗೆ ಹಲವು ಬಾರಿ ಆರೋಪಿಗಳಲ್ಲಿ ಕೇಳಲು ಹೋದಾಗ ಅವರ ಕೊಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ. ಆರೋಪಿಗಳು ಒಟ್ಟು 12,70,000 ರೂ. ಹಣವನ್ನು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವುದಾಗಿ ವಿಕ್ರಮ್ ಪಿ. ಮಾಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.