ಪುತ್ತೂರು : ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಲಾಗುತ್ತಿದೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ದಕ್ಷಿಣ ಕನ್ನಡ, ಉಡುಪಿ ಬಿಲ್ಲವ ಪ್ರಮುಖರು 45 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ದು, ಇದೀಗ ಅವಕಾಶ ಇಲ್ಲದ ನಿಟ್ಟಿನಲ್ಲಿಇದೇ ಹಣದಿಂದ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ದಕ್ಷಿಣ ಕನ್ನಡ, ಉಡುಪಿ ವಿಧಾನಸಭೆ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಲ್ಲವ ಸಮಾಜದ ಮುಖಂಡ ಜಯಂತ ನಡುಬೈಲು ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಅವರ ಶ್ರದ್ಧಾಂಜಲಿ ಸಭೆಯಲ್ಲಿಅವರ ಕುಟುಂಬದವರಿಗೆ ಮನೆ ನಿರ್ಮಿಸುವ ಭರವಸೆ ನೀಡಲಾಗಿತ್ತು. ಅಲ್ಲದೆ ಮನೆಯ 3ಡಿ ವಿನ್ಯಾಸದ ಜತೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ. ಮುಂಗಡ ಹಣವನ್ನು ಪ್ರವೀಣ್ ನೆಟ್ಟಾರು ಅವರ ಕುಟುಂಬದವರ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿತ್ತು.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಇದಕ್ಕೆ ಭೂಮಿಪೂಜೆಯೂ ನಡೆದಿದೆ. ಈ ವಿಚಾರ ಸ್ವಾಗತಾರ್ಹವಾಗಿದ್ದು, ಈ ವಿಚಾರವನ್ನು ಸಂಸದರು ಬಿಲ್ಲವ ಮುಖಂಡರ ಜತೆ ಚರ್ಚಿಸಿ ಈ ವಿಚಾರಕ್ಕೆ ಇಳಿಯಬೇಕಿತ್ತು ಎಂಬುದು ಬಿಲ್ಲವ ಮುಖಂಡರಿಂಂದ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ನಮ್ಮ ಯಾವುದೇ ವಿರೋಧವಿಲ್ಲ. ಅದಾದ ಬಳಿಕ ಗುತ್ತಿಗೆದಾರರಿಗೆ ನೀಡಿದ ಏಳು ಲಕ್ಷವನ್ನು ನಾವು ಹಿಂಪಡೆದಿದ್ದೇವೆ ಎಂದು ತಿಳಿಸಿದರು.
ಇದೀಗ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಲು ಬಳಸುವ 45 ಲಕ್ಷ ರೂ.ನಲ್ಲಿ ತಲಾ ಐದು ಲಕ್ಷ ರೂ. ವೆಚ್ಚದಲ್ಲಿ14 ಮನೆ ನಿರ್ಮಿಸಿ ಕೊಡುವ ಯೋಜನೆಯಿದೆ. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಣಚ ಗ್ರಾಮದ ನಿವಾಸಿ ಚಂದ್ರಾವತಿ ಹಾಗೂ ಬಂಟ್ವಾಳ ಸಜಿಪಮೂಡ ನಿವಾಸಿ ಸುಂದರಿ ಅವ ಕುಟುಂಬಕ್ಕೆ ಮೊದಲ ಹಂತದಲ್ಲಿ ಮನೆ ನಿರ್ಮಾಣವಾಗಲಿದ್ದು, ಕಾಮಗಾರಿಯನ್ನು ಮುಂದಿನ ವಾರದಲ್ಲಿ ಹಮ್ಮಿಕೊಳ್ಳಲಾಗುವುದು.
ಉಳಿದ 12 ಮನೆಗಳನ್ನು ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಉಲ್ಲಾಸ್ ಕೋಟ್ಯಾನ್, ಅವಿನಾಶ್ ಸುವರ್ಣ ಮಂಗಳೂರು, ಮೋಹನ್‌ದಾಸ್ ಬಂಗೇರ, ಕಿಶನ್ ಅಮಿನ್ ಉಪಸ್ಥಿತರಿದ್ದರು.