ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ಹಣಕ್ಕಾಗಿ ಎರಡು ವರ್ಷದ ಬಾಲಕಿಯನ್ನು ಕೊಂದು ಚೀಲದಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ರಾಘವೇಂದ್ರನನ್ನು ಇದೀಗ ಬಂಧಿಸಲಾಗಿದೆ.
ಆರೋಪಿ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಏಪ್ರಿಲ್ 7 ರಂದು ರಾಘವೇಂದ್ರ ಬಾಲಕಿ ಮಾನ್ಸಿಯನ್ನು ಅಪಹರಿಸಿ ಆಕೆಯ ಪೋಷಕರಾದ ಶಿವಕುಮಾರ್ ಮತ್ತು ಮಂಜು ಅವರಿಂದ 2 ಲಕ್ಷ ರೂ. ಹಣಕ್ಕಾಗಿ ವಿಮೋಚನೆಗಾಗಿ ಬೇಡಿಕೆಯಿಡಲು ಯೋಜಿಸಿದ್ದ. ಬಾಲಕಿಯ ಪೋಷಕರು ದೇವ್ಲಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಐದು ವರ್ಷಗಳಿಂದ ರಾಘವೇಂದ್ರ ಅವರಿಗೂ ಅವರ ಪರಿಚಯವಿತ್ತು.
ರಾಘವೇಂದ್ರ ಕೆಲ ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಪತಿ ತನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು 10 ಲಕ್ಷ ರೂ. ಇಟ್ಟಿರುವುದಾಗಿ ಬಾಲಕಿಯ ತಂದೆ ಮಂಜು ಹೇಳುವುದನ್ನು ರಾಘವೇಂದ್ರ ಕೇಳಿಸಿಕೊಂಡಿದ್ದಾನೆ. ಹಣದ ಅವಶ್ಯಕತೆಯಿದ್ದ ರಾಘವೇಂದ್ರ ಬಾಲಕಿಯನ್ನು ಅಪಹರಿಸಿದ್ದಾನೆ.
ಮಗಳು ಕಾಣದಿದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಭಯಭೀತನಾದ ರಾಘವೇಂದ್ರ ಬಾಲಕಿಗೆ ಶಾಲು ಹೊದಿಸಿ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಚೀಲದಲ್ಲಿ ತುಂಬಿದ್ದ. ನಂತ್ರ ಶವವನ್ನು ಕಾಡಿನಲ್ಲಿ ಅಥವಾ ನದಿಗೆ ಎಸೆಯಲು ಅವರು ಮೊದಲು ಯೋಜಿಸಿದ್ದ. ಆದ್ರೆ ಇದಕ್ಕೂ ಮುನ್ನ ಆರೋಪಿ ಸಿಕ್ಕಿಬಿದ್ದಿದ್ದಾನೆ.