ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆ.2ರಂದು ಮಧ್ಯಾಹ್ನ 12.30ಕ್ಕೆ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೋದಿ ಆಗಮನ ಹಿನ್ನೆಲೆಯಲ್ಲಿ ಮಂಗಳೂರಿನ ಪೊಲೀಸರು ಎಲ್ಲ ಭದ್ರತಾ ಕಾರ್ಯ ಕೈಗೊಂಡಿದ್ದಾರೆ. ಭದ್ರತೆಗಾಗಿ ಅಧಿಕಾರಿಗಳ ಸಹಿತ ಒಟ್ಟು ಮೂರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪ್ರಧಾನಿ ಸಮಾವೇಶ ನಡೆಯುವ ಮಂಗಳೂರಿನ ಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನಕ್ಕೆ ಗುರುವಾರ ಭೇಟಿ ನೀಡಿ, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಮೋದಿ ಕಾರ್ಯಕ್ರಮದ ಭದ್ರತೆ ಹಿನ್ನೆಲೆಯಲ್ಲಿ ಡಿಜಿಪಿ ಅವರು ಗುರುವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಎಡಿಜಿಪಿ ಅವರು ಈಗಾಗಲೇ ಬಂದಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. 100 ಜನ ಅಧಿಕಾರಿಗಳು, ಎರಡು ಸಾವಿರ ಮಂದಿ ಸಿವಿಲ್ ಪೊಲೀಸರು, ಕೆಎಸ್‌ಆರ್‌ಪಿ, ಎಎನ್‌ಎಫ್, ಸಿಎಆರ್, ಕರಾವಳಿ ಭದ್ರತಾ ಪಡೆ, ಆರ್‌ಎಎಫ್, ಗರುಡ ಪಡೆ ಸೇರಿದಂತೆ ಒಟ್ಟು ೩ ಸಾವಿರ ಪೊಲೀಸರು ಭದ್ರತೆ ಬಗ್ಗೆ ನಿಗಾ ಇರಿಸಿದ್ದಾರೆ. ಭದ್ರತೆ ಬಗ್ಗೆ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಲಾಗಿದೆ. ಸಂಸದ, ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ಕುಮಾರ್ ಕಟೀಲು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ಕುಮಾರ್, ದ.ಕ. ಜಿಲ್ಲೆಯ ಶಾಸಕರು ಪ್ರಧಾನಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದರು.