ಮಂಗಳೂರು: ಶಾಲೆಯ ನಿವೃತ್ತ ಶಿಕ್ಷಕಿಯ ಪೆನ್ಷನ್ ಹಣಕ್ಕೆ ಅಗತ್ಯವಾಗಿರುವ ದಾಖಲೆ ನೀಡಲು ಶಾಲೆಯ ಸಂಚಾಲಕಿ 5 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಅಗಿ ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮಂಗಳೂರು ಹೊರವಲಯದ ಬಜ್ಪೆ ನಿರಂಜನ ಸ್ವಾಮಿ ಸರ್ಕಾರಿ ಅನುದಾನಿತ ಶಾಲೆಯ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಯಾಗಿದ್ದಾರೆ.
ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಹಾಗು ಮುಖ್ಯ ಶಿಕ್ಷಕಿಯಾಗಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೋಭಾರಾಣಿರವರು ದಿನಾಂಕ 31.07.2023 ರಂದು ವಯೋನಿವೃತ್ತಿ ಹೊಂದಲಿದ್ದು, ತನ್ನ ವಯೋ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ದಿನಾಂಕ 25.05.2023 ರಂದು ಶ್ರೀ ನಿರಂಜನ ಸ್ವಾಮೀ ಅನುದಾನಿತ ಶಾಲೆಯ ಮ್ಯಾನೇಜ್‌ಮೆಂಟ್ ಸಂಚಾಲಕರಾದ ಶ್ರೀಮತಿ ಜ್ಯೋತಿ ಎನ್ ಪೂಜಾರಿರವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿಕೊಂಡು ಸ್ವೀಕೃತಿಯನ್ನು ನೀಡುವಂತೆ ಕೋರಿಕೊಂಡಿದ್ದರು.
ಸಂಚಾಲಕರಾದ ಶ್ರೀಮತಿ ಜ್ಯೋತಿ.ಎನ್.ಪೂಜಾರಿರವರು ಸ್ವೀಕೃತಿಯನ್ನು ನಂತರ ನೀಡುವುದಾಗಿ ತಿಳಿಸಿ, ಪಿಂಚಣಿ ಉಪದಾನ ಪತ್ರಗಳನ್ನು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸದೇ, ಸ್ವೀಕೃತಿ ಪತ್ರವನ್ನು ನೀಡದೇ ಫಿರ್ಯಾದಿದಾರರಿಗೆ ಸತಾಯಿಸಿ, ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕಳುಹಿಸಬೇಕಾದರೆ ರೂ.20,00,000/- (ಇಪ್ಪತ್ತು ಲಕ್ಷ) ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು.
ಮತ್ತೆ ಜ್ಯೋತಿಯರನ್ನು ಭೇಟಿ ಮಾಡಿ ತನ್ನ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಿ ಕಳುಹಿಸಿಕೊಡುವಂತೆ ಕೋರಿಕೊಂಡರೂ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಬೇಕಾದರೆ, ರೂ 5,00,000/- (ಐದು ಲಕ್ಷ) ಕೊಡಬೇಕು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಶೋಭಾ ರಾಣಿ ಅವರು ಮಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಇಂದು ಐದು ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲಿಸರು ರೆಡ್ ಹ್ಯಾಂಡಾಗಿ ಆರೋಪಿ ಶಾಲಾ ಸಂಚಾಲಕಿ ಜ್ಯೋತಿಯವರನ್ನು ಹಿಡಿದು ಕಾನೂನು ಕ್ರಮ ಜರುಗಿಸಿದ್ದಾರೆ.
ಆರೋಪಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಶ್ರೀಮತಿ ಕಲಾವತಿ.ಕೆ, ಚಲುವರಾಜು, ಬಿ, ಹಾಗೂ ಪೊಲೀಸ್ ನಿರೀಕ್ಷಕರಾದ, ವಿನಾಯಕ ಬಿಲ್ಲವ ಇವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.