ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದಲೇ 50 ಲಕ್ಷ ರೂ. ದರೋಡೆಗೈದಿರುವ ಪ್ರಕರಣದ ಪ್ರಮುಖ ಆರೋಪಿಯನ್ನು ವಿಶೇಷ ತನಿಖಾ ಪೊಲೀಸ್ ತಂಡ ತಮಿಳುನಾಡಿನ ತಿರುಚ್ಚಿಯಲ್ಲಿ ಬಂಧಿಸಿದೆ.
ತಿರುಚ್ಚಿ ರಾಮ್‌ಜಿ ನಗರ ಹರಿಭಾಸ್ಕರ ಕಾಲನಿಯ ಕಾವರ್ಣನ್(28) ಬಂಧಿತ ಆರೋಪಿ. 2024ರ ಮಾರ್ಚ್ 24ರಂದು ಕಾಸರಗೋಡಿನ ಉಪ್ಪಳದಲ್ಲಿ ಈ ದರೋಡೆ ನಡೆದಿತ್ತು. ಎಟಿಎಂಗೆ ಹಣ ತುಂಬಿಸಲು ಆಗಮಿಸಿದ ವಾಹನದಲ್ಲಿದ್ದ 50 ಲಕ್ಷ ರೂ. ಹಣವನ್ನು ದರೋಡೆ ಮಾಡಲಾಗಿತ್ತು.
ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಆರೋಪಿ ಮುತ್ತು ಕುಮಾರ್ ಎಂಬಾತನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಬಂಧಿಸಲಾಗಿತ್ತು. ಆದರೆ ದರೋಡೆಯ ಸೂತ್ರಧಾರ ಕಾವರ್ಣನ್ ಹಾಗೂ ಇನ್ನೋರ್ವ ಆರೋಪಿ ಪರಾರಿಯಾಗಿದ್ದರು.
ಇವರ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದಲ್ಲಿ ಕಾವರ್ಣನ್ ತಿರುಚ್ಚಿಯಲ್ಲಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.