ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಣ್ಣ ಕಾಫಿ ಶಾಪ್ ಹೊಂದಿರುವ ವ್ಯಕ್ತಿ ತನ್ನ ಬ್ಯಾಂಕ್ ಖಾತೆ ನೋಡಿ ತಲೆ ತಿರುಗಿ ಬಿದ್ದಿದ್ದಾರೆ. ಅಂದರೆ ದಿನಕ್ಕೆ ನೂರು ಅಥವಾ ಸಾವಿರ ರೂ.ಗಳ ಆದಾಯ ಮಾಡುತ್ತಿದ್ದ ಇವರ ಖಾತೆಗೆ 999 ಕೋಟಿ ಹಣ ಜಮೆ ಆಗಿದೆ.
ಹೌದು, ಇವರ ಫೋನ್‌ಗೆ ಠಣ್ ಎಂದು ಒಂದು ಮೆಸೆಜ್ ಬಂದಿದೆ. ಮೆಸೆಜ್ ತೆರೆದು ನೋಡಿದ್ರೆ 999 ಕೋಟಿ ರೂ.ಗಳ ಹಣ ಜಮೆ ಆಗಿರುವುದು ತಿಳಿದುಬಂದಿದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಮತ್ತೆ ಅಲ್ಲಿ ಇದ್ದ ಸಂಖ್ಯೆಯನ್ನು ಲೆಕ್ಕ ಹಾಕಲು ಮುಂದಾಗಿದ್ದಾರಂತೆ. ಪದೇ ಪದೇ ಲೆಕ್ಕ ಹಾಕಿದರೂ ಅದು 999 ಕೋಟಿ ರೂ. ಗಳನ್ನು ತೋರಿಸಿದೆ.
ಅರೇ… ಇದೇನಪ್ಪ ನನ್ನ ಖಾತೆಗೆ ಇಷ್ಟು ಹಣ ಹಾಕಿದವರು ಯಾರು? ಯಾಕೆ ಹಾಕಿದ್ದಾರೆ ಎಂದು ಯೋಚಿಸುತ್ತಿರವಾಗಲೇ ಅವರಿಗೆ ಶಾಕ್ ಎದುರಾಗಿದೆ. ಅದುವೇ ಅವರ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಇದನ್ನು ನೋಡಿ ಸಂತಸದಿಂದ ಇದ್ದ ಇವರು ಕ್ಷಣ ಮಾತ್ರದಲ್ಲಿ ಸಂಕಷ್ಟಕ್ಕೆ ಈಡಾಗುವಂತೆ ಆಗಿದೆ.
ಬ್ಯಾಂಕ್ ಖಾತೆ ಫ್ರೀಜ್
ಯಾಕೆಂದರೆ ಶಾಪ್‌ನಲ್ಲಿ ಯುಪಿಐ ಪಾವತಿಗೆ ಈ ಒಂದೇ ಬ್ಯಾಂಕ್ ಅನ್ನು ಆಶ್ರಯಿಸಿಕೊಂಡಿದ್ದಾರಂತೆ. ಆದರೆ ಬ್ಯಾಂಕ್ ಫ್ರೀಜ್ ಆದ ಕಾರಣ ಬ್ಯಾಂಕ್ ವ್ಯವಹಾರವನ್ನು ಮಾಡಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ ಈ ರೀತಿ ಯಾರು ಮಾಡಿದ್ದಾರೆ? ಯಾವ ಕಾರಣಕ್ಕೆ ಮಾಡಿದ್ದಾರೆ ಎಂದೆಲ್ಲಾ ತಲೆಕೆಡಿಸಿಕೊಂಡು ಕುಂತಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ಮನವಿ
ಇನ್ನು ಇಷ್ಟು ಮೊತ್ತದ ಹಣ ಜಮೆ ಆದ ಕೇವಲ 48 ಗಂಟೆಗಳಲ್ಲಿ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಬೃಹತ್ ಠೇವಣಿ ಕಣ್ಮರೆ ಆಗಿದೆ. ಇದರಿಂದ ಅವರು ಅಂಗಡಿಯಲ್ಲಿ ವ್ಯಾಪಾರ ಮಾಡಲು ಸಹ ಆಗದೆ ಕಳವಳ ಹೊರಹಾಕುತ್ತಿದ್ದಾರೆ. ಈ ನಡುವೆ ಈ ಸಮಸ್ಯೆ ಬಗೆಹರಿಸಲು ಈ ವ್ಯಕ್ತಿ ನಡೆಸಿದ ಪ್ರಯತ್ನಕ್ಕೆ ಬ್ಯಾಂಕ್ ನವರು ನಿರಾಸಕ್ತಿ ತೋರಿದ್ದಾರಂತೆ.
ಬ್ಯಾಂಕ್‌ಗೆ ನೇರವಾಗಿ ಭೇಟಿ ನೀಡಿದ್ದು ಮಾತ್ರವಲ್ಲದೆ, ಇಮೇಲ್‌ಗಳನ್ನು ಸಹ ಕಳುಹಿಸಿ ನನ್ನ ಖಾತೆ ಸರಿಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲವಂತೆ ಬ್ಯಾಂಕ್‌ನ ಅಧಿಕಾರಿಗಳು. ಅಧಿಕಾರಿಗಳು ನನ್ನ ಬ್ಯಾಂಕ್ ಅನ್ನು ಸರಿಮಾಡಿಕೊಡುವ ಬದಲಾಗಿ ನನಗೆ ವಿವರಗಳನ್ನು ಕೇಳುತ್ತಿದ್ದಾರೆ, ನಿಮ್ಮ ಮನೆ ಎಲ್ಲಿದೆ, ನೀವು ಎಲ್ಲಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ತಾಂತ್ರಿಕ ದೋಷದಿಂದ ಭಾರೀ ದೋಷ ಸಂಭವಿಸಿರುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದು, ಇದನ್ನು ಎಚ್ಚರಿಕೆಯಿಂದ ತನಿಖೆ ಮಾಡಬೇಕಾಗುತ್ತದೆ. MyWealthGrowth.com ನ ಸಹ-ಸಂಸ್ಥಾಪಕ ಹರ್ಷದ್ ಚೇತನ್ವಾಲಾ ಅವರು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ವಿಷಯವನ್ನು ತಿಳಿಸುವಂತೆ ಇವರಿಗೆ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ಅವರು ಬ್ಯಾಂಕ್ ಸರಿಯಾಗುತ್ತದೆ ಎಂದುಕೊಂಡೇ ಇದ್ದಾರೆ. ಆದರೆ ದಸರಾ ರಜೆ ಹಾಗೂ ಎರಡನೇ ಶನಿವಾರ ಇದ್ದ ಕಾರಣ ಬ್ಯಾಂಕ್ ಇನ್ನೂ ಸರಿಯಾಗಿಲ್ಲ. ಸೋಮವಾರದ ನಂತರ ಏನಾಗುತ್ತದೆ ಅನ್ನೋದನ್ನು ಕಾದುನೋಡಬೇಕಿದೆ.