ಮಂಗಳೂರು : ಮಂಗಳೂರು ನಗರದ ಪಾಂಡೇಶ್ವರದಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಮೊಟ್ಟೆ ಎಸೆದ ಘಟನೆಯೊಂದು ವಿಕೋಪಕ್ಕೆ ಹೋಗುವುದನ್ನು ತಪ್ಪಿಸುವ ಮೂಲಕ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸಮಯಪ್ರಜ್ಞೆ ಮೆರೆದ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಮಂಗಳೂರಿನಲ್ಲಿ ನಡೆದ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಸಮಾವೇಶ ಆಯೋಜನೆಗೊಂಡಿತ್ತು.
ಸಂಜೆ ವೇಳೆ ಸುಮಾರಿಗೆ ಪಾಂಡೇಶ್ವರದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಂಪೌಂಡ್‌ಗೆ ಯಾರೋ ಕೋಳಿ ಮೊಟ್ಟೆ ಹಾಗೂ ತೆಂಗಿನಕಾಯಿ ಎಸೆದಿದ್ದಾರೆ. ಈ ಸೂಕ್ಷ್ಮಾ ವಿಚಾರನ್ನು ಸ್ಥಳೀಯರು ಕೂಡಲೇ ಶಾಸಕ ವೇದವ್ಯಾಸ್ ಕಾಮತ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಶಾಸಕರು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ ಯಾವುದೇ ಕಾರಣಕ್ಕೂ ಪರಿಸ್ಥಿತಿ ಕದಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಕೂಡಲೇ ಘಟನೆಯ ಸ್ಥಳಕ್ಕೆ ಧಾವಿಸಿದ ಡಿಸಿಪಿ ಸಿದ್ಧಾರ್ಥ ಗೋಯಲ್ ತಂಡ ಪರಿಶೀಲನೆ ನಡೆಸಿದಾಗ, ಅದು ದೇವಸ್ಥಾನದ ಎದುರಿನ ಪ್ಲ್ಯಾಟ್ ನಿಂದ ಅನ್ಯ ಸಮುದಾಯದ ಇಬ್ಬರು ಪುಟಾಣಿಗಳು ಮಾಡಿದ ಮಕ್ಕಳಾಟ ಎಂಬುದು ಗೊತ್ತಾಗಿತ್ತು.
10 ವರ್ಷದೊಳಗಿನ ಈ ಮಕ್ಕಳು ಪ್ಲ್ಯಾಟ್ ನ ಮಹಡಿಯ ಕಿಟಕಿಯಿಂದ ದೇವಸ್ಥಾನದ ಅಂಗಣಕ್ಕೆ ತಮ್ಮ ಕೈಯಲ್ಲಿದ್ದ ಮೊಟ್ಟೆ ಹಾಗೂ ತೆಂಗಿನಕಾಯಿ ಎಸೆದಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ಮಕ್ಕಳ ಪೋಷಕರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಲ್ಲದೇ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆಯನ್ನೂ ನೀಡಿದರು, ಜೊತೆಗೆ ದೇವಸ್ಥಾನದ ಹೊರಾಂಗಣಕ್ಕೂ ಪ್ರತ್ಯೇಕ ಸಿಸಿ ಕ್ಯಾಮರಾ ಅಳವಡಿಸುವಂತೆ ದೇವಸ್ಥಾನ ಆಡಳಿತ ಮಂಡಳಿಗೆ ತಿಳಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. ಸಕಾಲಿಕ ಕ್ರಮದಿಂದ ಸಾಮರಸ್ಯ – ಸೌಹಾರ್ದತೆಗೆ ಒತ್ತು ನೀಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತರ ಸಮಯ ಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ.