ಬಂಟ್ವಾಳ: ದನಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಬಸ್ ನಿಲ್ದಾಣದ ಬಳಿ ನಡೆದಿದೆ.
ಕಲ್ಲಡ್ಕ – ವಿಟ್ಲ ರಸ್ತೆಯ ಮಧ್ಯ ಭಾಗದ ಕೆಲಿಂಜ ಎಂಬಲ್ಲಿ ಬಸ್ ನಿಲ್ದಾಣದ ಬಳಿ ರಸ್ತೆಯ ಬದಿಯಲ್ಲಿ ದನದ ಬೇರೆ ಬೇರೆ ಭಾಗವನ್ನು ಎಸೆದು ಹೋದ ಘಟನೆ ನಡೆದಿದ್ದು, ಇದನ್ನು ನೋಡಿದ ಸ್ಥಳೀಯರು ಗ್ರಾ.ಪಂ.ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಗ್ರಾ.ಪಂ.ಸದಸ್ಯರು ವಿಟ್ಲ ಪೋಲೀಸರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ವಿಟ್ಲ ಪೋಲಿಸರು ಬೇಟಿ ನೀಡಿ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಮೇಲ್ನೋಟಕ್ಕೆ ದನಗಳ ಕೈ ಕಾಲು,ಚರ್ಮ,ಹಲ್ಲು,ತಲೆಯ ಭಾಗದಂತೆ ಕಂಡು ಬಂದಿದ್ದು ಹೆಚ್ಚಿನ ಮಾಹಿತಿಯನ್ನು ತನಿಖೆಯಬಳಿಕ ಪೊಲೀಸರು ತಿಳಿಸಬೇಕಾಗಿದೆ.ಈ ಸ್ಥಳದಲ್ಲಿ ಇದು ಮೊದಲ ಬಾರಿ ಎಸೆದು ಹೋಗಿರುವ ಪ್ರಸಂಗ ಅಲ್ಲ.ಅನೇಕ ಬಾರಿ ಇದೇ ರೀತಿ ತ್ಯಾಜ್ಯವನ್ನು ಎಸೆದು ಹೋಗಿದ್ದಾರೆ ಎಂಬ ವಿಚಾರವನ್ನು ಸ್ಥಳೀಯರು ತಿಳಿಸಿದ್ದಾರೆ. ಇಂತಹ ಸಮಾಜಘಾತುಕ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಎಂಬುದರ ತನಿಖೆ ಮಾಡುತ್ತೇವೆ, ಅಂತಹವರ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಪೋಲೀಸರು ನೀಡಿದ್ದಾರೆ.ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಗ್ರಾ.ಪಂ.ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಇಂತಹ ಘಟನೆಗಳು ಅಶಾಂತಿಗೆ ಕಾರಣವಾಗಬಹುದಾದ ಹಿನ್ನೆಲೆಯಲ್ಲಿ ಗ್ರಾಮಪಂಚಾಯತ್ ಅಲ್ಲಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವ ಕಾರ್ಯ ಮಾಡಬೇಕು ಎಂಬುದು ಸ್ಥಳೀಯರ ಮಾತು.