ಉಳ್ಳಾಲ: ಉಳ್ಳಾಲದಲ್ಲಿ ಶುಕ್ರವಾರ ಮಧ್ಯಾಹ್ನ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಚಾಕುವಿನಿಂದ ಇರಿದು ಕಾರು, ಲ್ಯಾಪ್ ಟಾಪ್ ದರೋಡೆ ಮಾಡಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ರೌಡಿ ಶೀಟರ್ ಹಸೈನಾರ್‌ನನ್ನ ಕಾರು ಸಮೇತ ಅರೆಸ್ಟ್ ಮಾಡಲಾಗಿದ್ದು, ತಲೆಮರೆಸಿ ಕೊಂಡಿರುವ ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಮೀರ್(33) ಎಂಬ ಗುತ್ತಿಗೆದಾರನನ್ನು ಉಳ್ಳಾಲದ ಸುಂದರಿ ಭಾಗ್ ನಿವಾಸಿ ಹಸೈನಾರ್ ತಡೆದು ಪರಿಚಯಿಸಿದ್ದಾನೆ. ಕಟ್ಟಡವೊಂದರ ಕಾಮಗಾರಿ ಇದೆ ಮಾಡುತ್ತೀರಾ ಎಂದು ಶಮೀರ್‌ನನ್ನ ಯಾಮಾರಿಸಿದ ಹಸೈನಾರ್ ಗುತ್ತಿಗೆದಾರನ ಕಾರನ್ನೇರಿ ಅಬ್ಬಕ್ಕ ಸರ್ಕಲ್ ಕಡೆ ತೆರಳಿದ್ದಾನೆ. ಅಬ್ಬಕ್ಕ ಸರ್ಕಲ್ ಬಳಿ ಹಸೈನಾರ್‌ನ ಮತ್ತಿಬ್ಬರು ಸಹಚರರಾದ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಎಂಬಿಬ್ಬರು ಕಾರು ಹತ್ತಿದ್ದಾರೆ. ಉಳ್ಳಾಲದ ಬಸ್ತಿ ಪಡ್ಪು ಎಂಬಲ್ಲಿ ಕಾರು ತಲುಪುತ್ತಿದ್ದಂತೆ ಶಮೀರ್ ಕಾಲಿಗೆ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆಗೈದು ಹಣ ಸಿಗದಾಗ ಕಾರು, ಲ್ಯಾಪ್ ಟಾಪ್ ದರೋಡೆಗೈದಿದ್ದಾರೆ. ರೌಡಿಗಳಿಂದ ತಪ್ಪಿಸಿದ ಶಮೀರ್ ಉಳ್ಳಾಲ ಠಾಣೆಗೆ ಬಂದು ದೂರು ನೀಡಿದ್ದಾರೆ. ಎಸಿಪಿ ಧನ್ಯಾ ನಾಯಕ್ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರ್‌ನನ್ನ ಮಧ್ಯರಾತ್ರಿಯೇ ಬಂಧಿಸಿದೆ. ದರೋಡೆ ಮಾಡಿದ ಕಾರು, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಲಾದ ಚಾಕುವನ್ನು ದಸ್ತಗಿರಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.