ಕಾಸರಗೋಡು: ಮಂಜೇಶ್ವರ ಚುನಾವಣಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರ ನ್ ಸೇರಿದಂತೆ ಎಲ್ಲಾ ಆರೋಪಿಗಳು ಬುಧವಾರ ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಲಾಗಿದೆ.
ಯುವ ಮೋರ್ಚಾ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆ. ಸುರೇಶ್ ನಾಯ್ಕ್ , ಮಣಿಕಂಠ ರೈ, ಲೋಕೇಶ್ ನೋಂಡಾ ಇತರರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಹಿಂದೆ ಮೂರು ಬಾರಿ ನ್ಯಾಯಾಲಯ ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಆರೋಪಿಗಳು ಹಾಜರಾಗಿರಲಿಲ್ಲ.ಬುಧವಾರ ನಡೆದ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರ ನ್ ಬಿ ಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂತೆಗೆಯಲು ಎರಡೂವರೆ ಲಕ್ಷ ರೂ. ಹಾಗೂ ಮೊಬೈಲ್ ಫೋನ್ ನೀಡಿ ನಾಮಪತ್ರ ಹಿಂಪಡೆಯಲಾಗಿತ್ತು. ಚುನಾವಣೆ ಬಳಿಕ ಪ್ರಕರಣ ಬಳಿಕ ಬೆಳಕಿಗೆ ಬಂದಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.