ಉಡುಪಿ: ಮಣಿಪಾಲದಲ್ಲಿ 2020ರ ಸೆಪ್ಟೆಂಬರ್ 10ರಂದು ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಮಣಿಪಾಲ ಪೊಲೀಸರಿಂದ ಬಂಧಿಸಲ್ಪಟ್ಟ ಧಾರವಾಡ ಮೂಲದ ಫಾರೂಕ್ ಶೇಖ್ ಹಾಗೂ ಅಬ್ದುಲ್ ರಜಾಕ್ ಎಂಬ ಆರೋಪಿಗಳಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಇವರು ಒಂದು ವರ್ಷದ ಕಠಿಣ ಸಜೆ ಹಾಗೂ ತಲಾ 20,000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳಿಬ್ಬರು 2020ರ ಸೆಪ್ಟೆಂಬರ್ 10ರಂದು ಸಂಜೆ 4ಗಂಟೆ ಸುಮಾರಿಗೆ ಮಣಿಪಾಲದ ಶಿಂಬ್ರಾ ಎಂಬಲ್ಲಿರುವ ಬಾಬಾ ಪಾಯಿಂಟ್ ಕ್ರಾಸ್ ಬಳಿ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತಿದ್ದಾಗ ಮಾಹಿತಿ ಪಡೆದು ಸ್ಥಳಕ್ಕೆ ದಾಳಿ ನಡೆಸಿದ ಮಣಿಪಾಲ ಠಾಣೆ ಪಿಎಸ್‌ಐ ರಾಜಶೇಖರ್ ವಂದಲಿ ಇವರಿಂದ ಬಂಧಿಸಲ್ಪಟ್ಟಿದ್ದರು. ಈ ವೇಳೆ ಅವರ ಬಳಿ ಎರಡು ಕೆ.ಜಿ.7ಗ್ರಾಂ ತೂಕದ ಗಾಂಜಾ ಪತ್ತೆಯಾಗಿತ್ತು. ಗಾಂಜಾದೊಂದಿಗೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ ಆರೋಪಿಗಳಿಬ್ಬರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ ಇಂದು ಇಬ್ಬರಿಗೂ ಒಂದು ವರ್ಷದ ಕಠಿಣ ಸಜೆ ಹಾಗೂ ತಲಾ 20,000ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.