ಮಂಗಳೂರು: ನಗರದ ಬಂಗ್ರ ಕೂಳೂರು ಗ್ರಾಮದ ಪಡ್ಡೋಡಿ ಯಲ್ಲಿ 2018ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಖುಲಾಸೆಗೊಳಿಸಿದ್ದಾರೆ. 2018ರ ನ.5ರಂದು ಪಡ್ಡೋಡಿ ಕಡೆಗೆ ಹೋಗುವ ರಸ್ತೆಯಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಪ್ರವೀಣ್ ಡಿಸೋಜ ಎಂಬವರು ನಿಲ್ಲಿಸಿ ಅದರ ಚಾಲಕನಲ್ಲಿ ನಿಧಾನವಾಗಿ ಹೋಗುವಂತೆ ತಿಳಿಸಿದರು. ಈ ವಿಷಯನ್ನು ಲಾರಿ ಚಾಲಕ ಅದರ ಮಾಲಕರಾದ ಎಡ್ವರ್ಡ್ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರಿಗೆ ತಿಳಿಸಿದ್ದ ಇದರಿಂದ ಕೋಪಗೊಂಡ ಇಬ್ಬರು ರಾತ್ರಿ ಸ್ಕೂಟರ್‌ನಲ್ಲಿ ಆಗಮಿಸಿ ಪ್ರವೀಣ್ ಡಿಸೋಜ ರವರಿಗೆ ಬೈದು ಕೊಲೆ ಮಾಡುವ ಉದ್ದೇಶದಿಂದ ಸ್ಫೋಟರ್‌ನಲ್ಲಿದ್ದ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿ ಮಾರಣಾಂತಿಕ ಗಾಯವನ್ನುಂಟು ಮಾಡಿ ಕೊಲೆಗೆ ಯತ್ನಿಸಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.