ಮಂಗಳೂರು:ನಿಷೇಧಿತ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಮಂಗಳೂರು ಸಿಸಿಬಿ ಪೊಲೀಸರು ಓರ್ವ ಆರೋಪಿಯ ಹೆಡೆಮುರಿಟ್ಟಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿ ಉಳ್ಳಾಲದ ಹರೇಕಳ ಗ್ರಾಮದ, ಪ್ರಸ್ತುತ ಬಜಾಲ್ ಪಡ್ಪು ನಿವಾಸಿ ಹಸೈನಾರ್ ಯಾನೆ ಅಚ್ಚು(32) ಎಂದು ಗುರುತಿಸಲಾಗಿದೆ. ಈತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ 12 ಗ್ರಾಂ ತೂಕದ 60,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, 1 ಮೊಬೈಲ್ ಫೋನ್, 1 ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.ಸೊತ್ತುಗಳ ಒಟ್ಟು ಮೌಲ್ಯ 70,500 ಆಗಬಹುದು ಎಂದು ಅಂದಾಜು ಮಾಡಲಾಗಿದೆ.ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.ಇನ್ನು ವಿಚಾರಣೆಯ ವೇಳೆ ಈ ಹಿಂದೆ ಆರೋಪಿ ವಿರುದ್ಧ ನಗರದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ಹಲ್ಲೆ ಪ್ರಕರಣ ಹಾಗೂ ಪಾಂಡೇಶ್ವರ ಠಾಣೆಯಲ್ಲಿ ಹಲ್ಲೆ ಹೀಗೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸದ್ಯ ಆರೋಪಿ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.