ಕಾಸರಗೋಡು: ಕೇರಳ-ಕರ್ನಾಟಕದ ಕಣ್ಣೂರು- ಕೊಡಗು ಗಡಿ ಪ್ರದೇಶದಲ್ಲಿ ಕೇರಳ ನಕ್ಸಲ್ ನಿಗ್ರಹ ಪಡೆ (ತಂಡರ್ ಬೋಲ್ಟ್) ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ನಕ್ಸಲ್ ಗಾಯಗೊಂಡಿದ್ದಾನೆ.
ಆಂಧ್ರಪ್ರದೇಶದ ಲತಾ ಮತ್ತು ತಮಿಳುನಾಡಿನ ವನಜಾಕ್ಷಿ ಪರಾರಿಯಾಗಿದ್ದಾರೆ. ಅರಣ್ಯದಿಂದ ಪರಾರಿಯಾಗಿರುವ ಈ ಇಬ್ಬರು ಬಸ್‌ನಲ್ಲಿ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಕಣ್ಣೂರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದಿಂದ ಮೂರು ರೈಫಲ್‌ಗಳು, ಒಂದು ಲ್ಯಾಪ್ ಟಾಪ್, ನಾಲ್ಕು ಮೊಬೈಲ್ ಫೋನ್ ಗಳು ಹಾಗೂ ಎರಡು ಟೆಂಟ್‌ಗಳನ್ನು ವಶಪಡಿಸಲಾಗಿದೆ. ಈ ಸ್ಥಳದಲ್ಲಿ 9 ಮಂದಿ ನಕ್ಸಲರು ಇದ್ದಿರಬಹುದೆಂದು ಶಂಕಿಸಲಾಗಿದೆ. ಪರಾರಿಯಾಗಿದ್ದವರು ಕಬಿನಿ ದಳದವರಾಗಿದ್ದಾರೆ. ಈ ದಳದ ಮುಖಂಡ ಮೊಯಿದೀನ್ ಈ ಪ್ರದೇಶದಲ್ಲಿ ತಂಗಿದ್ದನೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ.