ಉಡುಪಿ: ಇವತ್ತಿನ ಕೆಡಿಪಿ ಸಭೆ ಮಾಜಿ ಸಚಿವ ಸುನಿಲ್ ಕುಮಾರ್ ಮತ್ತು ಎಸ್‌ಪಿ ಜಟಾಪಟಿಗೆ ಸಾಕ್ಷಿಯಾಯಿತು. ಲಾರಿ ಮುಷ್ಕರ ಸಂದರ್ಭ ಪ್ರತಿಭಟನಾಕಾರರಿಗೆ ಎಸ್‌ಪಿ ನೋಟಿಸ್ ನೀಡಿದ ವಿಚಾರವಾಗಿ ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ ವಿರುದ್ಧ ಕೆಂಡಾಮಂಡಲರಾದರು. ಪ್ರತಿಭಟನೆ ಹೇಗೆ ಮಾಡಬೇಕು ಎಂದು ನೀವು ನಿರ್ಧರಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ. ನಾವು ಮನೆಯಲ್ಲಿ ಕೂತು ಭಜನೆ ಮಾಡಬೇಕಾ? ನಮ್ಮ ಜಿಲ್ಲೆಯಲ್ಲಿ ಹೇಗೆ ಪ್ರತಿಭಟನೆ ಮಾಡಬೇಕೆಂದು ನೀವೇ ಹೇಳಿ…ಎಂದು ಸುನೀಲ್ ಕುಮಾರ್ ಆಕ್ರೋಶಗೊಂಡಿದ್ದಾರೆ. ಮಾಜಿ ಸಚಿವರ ಮಾತಿಗೆ ಎಸ್‌ಪಿ ತಿರುಗೇಟು ನೀಡಿದ್ದು, ನಾನು ಕಾನೂನು ಪ್ರಕಾರ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲ ನಿಮಿಷಗಳ ಕಾಲ ಮಾತಿನ ಜಟಾಪಟಿ ಮುಂದುವರೆದಾಗ ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್, “ಸಾಕು ಸುಮ್ನಿರಪ್ಪಾ…ಜಾಸ್ತಿ ಆಯ್ತು ಎಂದು ಎಸ್‌ಪಿಗೆ ಬುದ್ಧಿವಾದ ಹೇಳಿದ್ದಾರೆ.