ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿ ಪಾದಚಾರಿ ಮಾರ್ಗದ ಪಕ್ಕದಲ್ಲಿನ ವಾಹನಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಸ್ಕೂಟರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್ ಸಂಗಪ್ಪ(57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ (42), ಆಟೋ ಚಾಲಕ ಧರ್ಮೇಂದ್ರ (35) ಗಾಯಗೊಂಡು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಲಾರಿ ಮುಲ್ಕಿ ಜಂಕ್ಷನ್ ತಲುಪುತ್ತಿದ್ದಂತೆ ಹೆದ್ದಾರಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿ ಕೇಡ್‌ಗಳನ್ನು ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಸೀದಾ ಎಡಬದಿಯ ಡಿವೈಡರ್ ಮೇಲೇರಿದೆ. ಸಮೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ ಅವರಿಗೆ ಡಿಕ್ಕಿ ಹೊಡೆದು ಮತ್ತೆ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಸ್ಕೂಟರನ್ನು ಎಳೆದುಕೊಂಡು ಹೋಗಿ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಅಲ್ಲಿಯೂ ಲಾರಿ ನಿಲ್ಲದೆ ಪುನಃ ಬಲಬದಿಗೆ ಡಿವೈಡರ್ ಮೇಲೇರಿ ಹೆದ್ದಾರಿಯಲ್ಲಿ ಬಂದು ನಿಂತಿದೆ. ಕಲವೇ ಕ್ಷಣಗಳಲ್ಲಿ ಅಪಘಾತ ನಡೆದು ಹೋಗಿದೆ.
ಅಪಘಾತದಿಂದ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರೆ ಉಳಿದ ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯ ಬದಿಯಲ್ಲಿ ಕುಳಿತಿದ್ದ ಉತ್ತರ ಕರ್ನಾಟಕದ ಅನೇಕ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿ ಪವಾಡ ಸದೃಶ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಸ್ಕೂಟರ್ ಹಾಗೂ ಆಟೋಗೆ ಹಾನಿಯಾಗಿದ್ದು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.