ಬಂಟ್ವಾಳ: ಪರವಾನಗಿ ಪಡೆಯದೆ ಅಕ್ರಮವಾಗಿ ನೇತ್ರಾವತಿ ನದಿಯಿಂದ ಮರಳು ತೆಗೆದು ಸಾಗಾಟ ಮಾಡುತ್ತಿದ್ದಾರೆ ಎಂದು ಆಕ್ರೋಶಿತಗೊಂಡ ಗ್ರಾಮಸ್ಥರು ಎರಡು ಮರಳು ತುಂಬಿದ ಲಾರಿಗಳನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ತರಾಟೆಗೆ ತಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ನಡೆದಿದೆ. ಘಟನೆಯ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನೇತ್ರಾವತಿ ನದಿಯಿಂದ ಬರಿಮಾರು ಗ್ರಾಮದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಮರಳುಗಾರಿಕೆಗೆ ಇಲಾಖೆ ಸಮ್ಮತಿ ನೀಡಿಲ್ಲವಾದರೂ, ಇಲ್ಲಿ ರಾಜರೋಷವಾಗಿ ಪರವಾನಗಿ ಪಡೆದು ಮರಳು ತೆಗೆಯುವುದಾಗಿ ಜನರನ್ನು ಮೋಸ ಮಾಡಿ ಮರಳುಗಾರಿಕೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಮರಳು ತುಂಬಿಸಿಕೊಂಡು ಮಾರಾಟಕ್ಕೆ ತೆರಳುತ್ತಿದ್ದ ಎರಡು ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಅಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿತ್ತು ಎನ್ನಲಾಗಿದೆ.
ಪೋಲೀಸರು ಸ್ಥಳಕ್ಕೆ ಆಗಮಿಸಿದೆ ಲಾರಿಯನ್ನು ಬಿಟ್ಟಿರಲಿಲ್ಲ. ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ, ಅಕ್ರಮ ಮರಳು ಗಾರಿಕೆಯಾಗಿದ್ದರೆ ಸೂಕ್ತವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಲಾರಿಯನ್ನು ಬಿಟ್ಟು ಕಳುಹಿಸಿದರು.