ಮಂಗಳೂರು: ನವಮಂಗಳೂರು ಬಂದರಿನಿಂದ ನೆದರ್ಲೆಂಡ್‌ಗೆ ಬಂದರಿಂದ ಶೆಲ್ ಕಂಪೆನಿಯ ವೈಮಾನಿಕ ಇಂಧನ ವನ್ನು ಹೊತ್ತೊಯ್ಯುತ್ತಿದ್ದತೈಲ ಸಾಗಾಟ ಹಡಗಿನ ಮೇಲೆ ಯೆಮೆನ್ ಸಮೀಪ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.
ಅದೃಷ್ಟವಶಾತ್ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ ಮತ್ತು ಹಡಗು-ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಶೆಲ್ ಕಂಪೆನಿಯು ಖರೀದಿಸಿ ನೆದರ್ಲೆಂಡ್‌ಗೆ ಸಾಗಾಟ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಡಿ. 11ರಂದು ರಾತ್ರಿ ಯೆಮೆನ್‌ನ ಬಂಡುಕೋರರ ಆಡಳಿತವಿರುವ ಬಾಬ್ ಎಲ್-ಮಂಡೆಬ್ ಕೊಲ್ಲಿಯಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ. ಮಂಗಳೂರಿನಿಂದ ವಿವಿಧ ಕಂಪೆನಿಗಳ ಸರಕು ತುಂಬಿದ ಹಡಗುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ ಬಹುತೇಕ ಹಡಗುಗಳು ತಲುಪಲಿರುವ ಕೊನೆಯ ನಿಲ್ದಾಣದ ಬಗ್ಗೆ ಇಲ್ಲಿ ಮಾಹಿತಿ ಇರುವುದಿಲ್ಲ. ಯಾಕೆಂದರೆ ಆ ಹಡಗುಗಳು ವಯಾ ದೇಶ-ವಿದೇಶದ ಇತರ ಬಂದರಿಗೆ ಹೋಗಿ ಅಲ್ಲಿಂದ ಸರಕು ತುಂಬಿಸಿಕೊಂಡು ಇತರ ಕಡೆಗೆ ಹೋಗುತ್ತವೆ. ಹೀಗಾಗಿ ಯೆಮೆನ್ ಸಮೀಪ ಗುರಿ ತಪ್ಪಿದ ಕ್ಷಿಪಣಿ ದಾಳಿಗೆ ಒಳಗಾದ ಹಡಗಿನ ವಿವರ ನಿರೀಕ್ಷಿಸಲಾಗುತ್ತಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರ ಹೇಳಿದೆ