ಉಳ್ಳಾಲ: ಕಳೆದೆರಡು ದಿವಸಗಳಿಂದ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು ಸೋಮೇಶ್ವರ, ಉಚ್ಚಿಲದ ಬಟ್ಟಂಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಕಳೆದ ವರುಷ ಭಾಗಶಃ ಅಳಿದುಹೋಗಿ ಉಳಿದಿದ್ದ ರಸ್ತೆಯು ಸಮುದ್ರ ಪಾಲಾಗಿದೆ.
ಸೋಮೇಶ್ವರ, ಉಚ್ಚಿಲ ಪ್ರದೇಶಗಳು ಕಳೆದ ಐದು ವರುಷಗಳಿಂದಲೂ ಕಡಲ್ಕೊರೆತ ಸಮಸ್ಯೆಯಿಂದ ನಲುಗುತ್ತಿದೆ.ಈ ಪ್ರದೇಶದಲ್ಲಿ ನಡೆದ ಅವೈಜ್ಞಾನಿಕ ಬ್ರೇಕ್ ವಾಟರ್ ಕಾಮಗಾರಿಯು ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ಬಂದರು ಸಚಿವ ಎಸ್.ಅಂಗಾರ ಅವರು ಇಲ್ಲಿಗೆ ಭೇಟಿ ನೀಡಿ ಕಾಸರಗೋಡಿನ ನೆಲ್ಲಿಕುನ್ನು ಮಾದರಿಯ ಸೀ ಬ್ರೇಕ್ ವಾಟರ್ ಕಾಮಗಾರಿಯನ್ನ ಇಲ್ಲಿಯೂ ನಡೆಸುವ ಬಗ್ಗೆ ಅಧ್ಯಯನ ಮತ್ತು ಸ್ಥಳ ಪರಿಶೀಲನೆ ನಡೆಸಿದ್ದರು. ಸರಕಾರವು ಸುಖಾ ಸಮ್ಮನೆ ವ್ಯರ್ಥ ಯೋಜನೆಗಳಿಗೆ ಹಣ ಪೋಲು ಮಾಡದೇ ಆದಷ್ಟು ಶೀಘ್ರದಲ್ಲಿ ಶಾಶ್ವತ ಕಡಲ್ಕೊರೆತ ತಡೆ ಕಾಮಗಾರಿ ನಡೆಸುವಂತೆ ಸ್ಥಳೀಯ ಮೀನುಗಾರ ಸುಖೇಶ್ ಉಚ್ಚಿಲ್ ಆಗ್ರಹಿಸಿದ್ದಾರೆ.