ಕಡಬ: ಕಡಬದಲ್ಲಿ ಮತ್ತೆ ಕಾಡಾನೆಗಳು ತಮ್ಮ ಪ್ರತಾಪ ತೋರಿಸಲು ಆರಂಭಿಸಿದೆ. ಶನಿವಾರ ಮುಂಜಾನೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕೊಣಾಜೆ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳ ಹಿಂಡು ಅಟ್ಟಿಸಿಕೊಂಡು ಬಂದಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ರಬ್ಬರ್ ನಿಗಮದ ಟ್ಯಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು. ಅವರಿಗೆ ತರಚು ಗಾಯಗಳಾಗಿದ್ದು, ಅವರಿಗೆ ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ
ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ. ಭಯಭೀತರಾದ ಅವರು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಕಾಡಾನೆಗಳ ಹಿಂಡು ದಾಳಿ ಮಾಡಿ ಇಬ್ಬರನ್ನು ಕೊಂದು ಹಾಕಿತ್ತು . ಬಳಿಕ ಜನರ ಪ್ರತಿಭಟನೆಗೆ ಹೆದರಿ ದುಬಾರೆಯಿಮದ ಸಾಕಾನೆಗಳನ್ನು ತಂದು ಒಂದು ಕಾಡಾನೆಯನ್ನು ಬಂಧಿಸಿದ್ದರು . ಕೆಲ ವಾರಗಳ ಹಿಂದೆ ಕಡಬ ಒತ್ತಿಕೊಂಡೆ ಇರುವ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಾಣಿಸಿಕೊಂಡು ಕಾರಿನ ಮೇಲೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿತ್ತು. ಕಳೆದ ಎರಡು ಮೂರು ದಿನಗಳಿಂದ ಸುಳ್ಯದ ಮಂಡೆಕೋಲಿನಲ್ಲಿ ಕಾಡಾನೆಗಳು ಹಿಂಡು ಕಾಣಿಸಿಕೊಂಡಿದ್ದು ಜನರನ್ನು ಭೀತರನ್ನಾಗಿಸಿದೆ.