ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್, ನೀರು ಪೂರೈಸಲು ಆದೇಶ ಹೊರಡಿಸಲಾಗಿದೆ.
ನವೆಂಬರ್ 1ರಂದು ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆ, ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್, ನೀರು ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್, ನೀರು ಒದಗಿಸಿದರೆ ಇದಕ್ಕೆ ವಹಿಸುವ ಅನುದಾನ ಬಳಸಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸಿ ಮಕ್ಕಳ ದಾಖಲಾತಿ ಹೆಚ್ಚಿಸಬಹುದಾಗಿದೆ ಎಂದು ಶಿಕ್ಷಣ ಇಲಾಖೆ ಕೋರಿದ್ದು, ಇದಕ್ಕೆ ಆರ್ಥಿಕ ಇಲಾಖೆ ಸಮ್ಮತಿಸಿದೆ.
2023 -24ನೇ ಸಾಲಿನ ಅಂತ್ಯದವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ವಿದ್ಯುತ್, ನೀರಿನ ಶುಲ್ಕ ಪಾವತಿಗೆ ಅಗತ್ಯವಿರುವ ಅನುದಾನದ ಪ್ರಸ್ತಾವನೆಯನ್ನು ಜಿಲ್ಲಾವಾರು ಸಲ್ಲಿಸುವಂತೆ ಸರ್ಕಾರ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆಗಳಿಂದ ನೇರವಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯವಿರುವ ಅನುದಾನ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.