ಮಂಗಳೂರು: ನಗರದ ಕಣ್ಣೂರು, ಬಜಾಲ್ ಹಾಗೂ ಬಡ್ಡ ಗ್ರಾಮದ ಸಿ.ಆರ್.ಝಡ್ ವಲಯದಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಐದು ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಗಣಿ ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿವಕೆ ಎಂ ನಾಗಭೂಷಣ್ ಮತ್ತು ಭೂವಿಜ್ಞಾನಿಗಳಾದ ಗಿರೀಶ್ ಮೋಹನ್ ಎಸ್ ಎನ್, ಡಾ॥ ಮಹದೇಶ್ವರ ಹೆಚ್.ಎಸ್ ಕಾರ್ಯಾಚರಣೆ ನಡೆಸಿದ್ದಾರೆ. ಇವರು ಕಣ್ಣೂರು ಗ್ರಾಮದ ಮಸೀದಿಯ ಬಳಿ ಹೋಗಿ ಅಲ್ಲಿಂದ ಮೋಟಾರು ಚಾಲಿತ ದೋಣಿಯಲ್ಲಿ ನೇತ್ರಾವತಿ ನದಿಯಲ್ಲಿ ಬಡ್ಲ ಬಜಾಲ್ ಎಂಬ ಪ್ರದೇಶಕ್ಕೆ ತೆರಳಿ ಅಕ್ರಮ ಸಾಮಾನ್ಯ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಐದು ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಹಮ್ಮದ್ ತೋಹಿಬ್ ಅಲಿಯಾಸ್ ಅಬ್ದುಲ್ ಹಮೀದ್, ಅಝರ್ ಬಜಾಲ್, ಹಸನಬ್ಬ, ಅಬ್ದುಲ್ ರೆಹಮಾನ್ ದೋಣಿಗಳ ಮಾಲಕರಾಗಿದ್ದಾರೆ. ಆರೋಪಿಗಳು ತಾವಾಗಿಯೇ ವಶಕ್ಕೆ ತೆಗೆದುಕೊಂಡಿರುವ ದೋಣಿಗಳು ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಸ್ಥಳೀಯರೂ ಈ ದೋಣಿಗಳು ಅವರದ್ದೇ ಎಂದು ಖಚಿತವಾಗಿ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಇವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.