ಹುಬ್ಬಳ್ಳಿ: ಎರಡು ವರ್ಷದ ಮಗುವೊಂದು ಅಂಗನವಾಡಿ ಸಿಬ್ಬಂದಿಗಳು ಕೊಟ್ಟ ಲಸಿಕೆ ಡೋಸ್ ಎಫೆಕ್ಟ್ ನಿಂದ ಮೃತಪಟ್ಟಿರುವ ಆರೋಪದ ಘಟನೆ ಹುಬ್ಬಳ್ಳಿಯ ಉಣಕಲ್ ಎಂಬಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿ ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬವರ ಎರಡು ವರ್ಷದ ಮೊಮ್ಮಗ ಧೃವ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ. ಧೃವ ಮಗು ತಾತ ಹಾಗೂ ಅಜ್ಜಿ ಮನೆಯಲ್ಲಿ ವಾಸವಿದ್ದರು. ಮಗುವಿಗೆ ಲಸಿಕೆ ಕೊಡಲು ಎಂದು ಅಜ್ಜಿ ಸಾಯಿನಗರದ ಅಂಗನವಾಡಿಗೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಲಸಿಕೆ ಕೊಡಿಸಿದ ಬಳಿಕ ಮಗುವಿಗೆ ತೀವ್ರ ಜ್ವರ ಬಂದಿತ್ತು. ಮಗು ಹೊಟ್ಟೆನೋವಿನಿಂದ ಬಳಲುತ್ತಿದ್ದಂತೆ ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆಯೇ ಮೃತಪಟ್ಟಿದೆ. ಲಸಿಕೆ ಓವರ್ ಡೋಸ್ ನಿಂದಾಗಿ ಮಗು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದು, ಕಿಮ್ಸ್ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.