ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳಿದ್ದು, ದೇವಸ್ಥಾನದ ಹೆಸರಿನಲ್ಲಿ ವಂಚಕರ ಜಾಲಗಳು ಸಕ್ರಿಯಗೊಂಡಿದೆ. ಮಂದಿರಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಂಚಕರು ಸಂದೇಶಗಳು ಹಾಗೂ ಕ್ಯೂಆರ್ ಕೋಡ್ ಹರಿಬಿಡುತ್ತಿದ್ದಾರೆ.
ಈ ಬಗ್ಗೆ ಜಾಗರೂಕರಾಗಿ ಇರುವಂತೆ ವಿಎಚ್‌ಪಿ ಮನವಿ ಮಾಡಿದೆ. ದೇವಾಲಯದ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ದೇಣಿಗೆ ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಎಚ್ಚರಿಕೆ ನೀಡಿದೆ. ಈ ಸಂದೇಶಗಳಲ್ಲಿ ಕ್ಯೂಆರ್ ಕೋಡ್ ಕೂಡ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ಅದು ವಂಚಕರ ಖಾತೆಗೆ ಸೇರುತ್ತದೆ ಎಂದು ತಿಳಿಸಿದೆ. ಈ ಬಗ್ಗೆ ವಿಎಚ್‌ಪಿ ವಕ್ತಾರ ವಿನೋಬ್ ಬನ್ಸಾಲ್ ಅವರು ಗೃಹ ಸಚಿವಾಲಯ ಮತ್ತು ಉತ್ತರ ಪ್ರದೇಶ ಹಾಗೂ ದಿಲ್ಲಿ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಂದಿರ ನಿರ್ಮಾಣವನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೊರತಾಗಿ ದೇಣಿಗೆ ಸಂಗ್ರಹಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.