ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ಯಾರಂಟಿ’ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ಗಳು ಹಾಗೂ ತಾಲ್ಲೂಕು ಮತ್ತು ಬಿಬಿಎಂಪಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ಗಳನ್ನು ರಚಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
ಮೂಲಗಳ ಪ್ರಕಾರ, ರಾಜ್ಯದ ಜಿಲ್ಲೆಗಳನ್ನು ಐದು ವಿಭಾಗಗಳಾಗಿ ಮಾಡಿ, ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಐವರು ಉಪಾಧ್ಯಕ್ಷರಿಗೆ ಪ್ರತಿ ವಿಭಾಗಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಸದಸ್ಯ ಕಾರ್ಯದರ್ಶಿ ಆದೇಶ ಹೊರಡಿಸಲಿದ್ದಾರೆ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಲ್ಲಿ ಒಬ್ಬ ಸದಸ್ಯ ಅಧ್ಯಕ್ಷ ಆಗಿರುತ್ತಾರೆ, ಉಳಿದಂತೆ ಐವರು ಉಪಾಧ್ಯಕ್ಷರು, 15 ಸದಸ್ಯರು ಇರಲಿದ್ದಾರೆ. ಉಳಿದಂತೆ ಆಯಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಇನ್ನು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಒಬ್ಬ ಸದಸ್ಯ ಅಧ್ಯಕ್ಷ, 14 ಸದಸ್ಯರು ಇರಲಿದ್ದಾರೆ. ಕಾರ್ಯನಿರ್ವಹಣಾಧಿಕಾರಿ (ಇಒ) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಉಳಿದಂತೆ 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಒಬ್ಬ ಸದಸ್ಯ ಅಧ್ಯಕ್ಷ, ಪ್ರತಿ ವಿಧಾನಸಭೆಯಿಂದ ಒಬ್ಬರಂತೆ 28 ಸದಸ್ಯರು, ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.