ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ನಾಡು ಎಂದರೂ ತಪ್ಪಾಗದು. ಇಲ್ಲಿನ ಒಂದೊಂದು ಪುರಾತನ ದೇವಾಲಯಗಳು ಒಂದೊಂದು ಇತಿಹಾಸ ಹೊಂದಿದೆ. ಧಾರ್ಮಿಕ ಕ್ಷೇತ್ರದ ಭೇಟಿಗೆ ಬರುವ ಜನರಿಗೆ ಇಲ್ಲಿನ ಎಲ್ಲಾ ಪ್ರವಾಸೋದ್ಯಮ ತಾಣಗಳ ಪರಿಚಯವಾದರೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಉತ್ತಮವಾಗಿ ಬೆಳೆಯಬಹುದು ಎಂಬ ದೂರದೃಷ್ಟಿಯಿಂದ ಟಿವಿ ವಿಕ್ರಮದ ಸಂಸ್ಥಾಪಕರು ಹಾಗೂ ಪೋಸ್ಟ್‌ಕಾರ್ಡ್ ಮಾಧ್ಯಮದ ಮುಖ್ಯಸ್ಥರಾದ ಮಹೇಶ್ ವಿಕ್ರಮ್ ಹೆಗ್ಡೆಯವರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹೇಶ್ ವಿಕ್ರಮ್ ಹೆಗ್ಡೆ ಯವರನ್ನು ಟ್ವಿಟರ್ ನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುತ್ತಿದ್ದು, ಈ ಹಿಂದೆ ವಿಕ್ರಮ್ ಹೆಗ್ಡೆಯವರ ಒಂದು ಟ್ವೀಟ್‌ಗೆ ಸ್ವತಃ ಮೋದಿಯವರು ಪ್ರತಿಕ್ರಿಯೆ ಕೂಡ ನೀಡಿದ್ದರು. ಇದು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸುದ್ಧಿ ಕೂಡ ಮಾಡಿತ್ತು. ಇದೀಗ ಮತ್ತೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಪ್ರಧಾನಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿರುವ ವಿಕ್ರಮ್ ಹೆಗ್ಡೆಯವರ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇಶಾದ್ಯಂತ ಈ ಪೋಸ್ಟ್ ವೈರಲ್ ಆಗಿದ್ದು, ಮಿಲಿಯನ್ ಜನರಿಗೆ ತಲುಪಿದೆ ಮತ್ತು ಸಾವಿರಾರು ಜನರು ತಮ್ಮ ತಮ್ಮ ಊರಿನ ಪ್ರವಾಸೋದ್ಯಮ ತಾಣಗಳ ಬಗ್ಗೆಯೂ ಉಲ್ಲೇಖಿಸಿ, ವಿಕ್ರಮ್ ಹೆಗ್ಡೆಯವರ ಪೋಸ್ಟ್ ಹಂಚಿಕೊಂಡಿದ್ದಾರೆ.
ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಾಗ ಸಹಜವಾಗಿ ಸುತ್ತಮುತ್ತಲಿನ ಪ್ರದೇಶಗಳು ಪ್ರಗತಿ ಸಾಧಿಸುತ್ತದೆ ಮತ್ತು ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ತಾಣಗಳು ಗುರುತಿಸಲ್ಪಡುತ್ತದೆ ಎಂಬುದು ಮಹೇಶ್ ವಿಕ್ರಮ್ ಹೆಗ್ಡೆಯವರ ಅಭಿಪ್ರಾಯ.