ಕಾಸರಗೋಡು: ಮನೆಯ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಉಪ್ಪಳ ಕುಬಣೂರು ನಿವಾಸಿ ಪದ್ಮನಾಭ (50) ಎಂದು ಗುರುತಿಸಲಾಗಿದೆ.
ಪದ್ಮನಾಭ ಅವರು ಕಳೆದ ಗುರುವಾರ ಸಂಜೆ ಕುಬಣೂರು ಪರಿಸರದ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಿಲ್ಸ್ ನಿರ್ಮಾಣಕ್ಕೆ ಕಾರ್ಮಿಕರನ್ನು ಕರೆದೊಯ್ದು, ಮೇಲಂತಸ್ತಿನಲ್ಲಿ ಕಾರ್ಮಿಕರ ಜತೆ ಅಳತೆ ತೆಗೆಯಲು ಸಹಕರಿಸುತ್ತಿದ್ದಾಗ ಆಯ ತಪ್ಪಿ ಮೆಟ್ಟಿಲಿನಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಇನ್ನು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಪದ್ಮನಾಭ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.