ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ನಾವೂರಿನ ಫರ್ಲಾದಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಟ್ಯಾಂಕರಿನ ಮಧ್ಯೆ ಢಿಕ್ಕಿ ಸಂಭವಿಸಿ ನಾಲ್ವರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದು ಬಸ್ ಹೆದ್ದಾರಿ ಬದಿಯ ಮನೆಗೆ ನುಗ್ಗಿದ ಘಟನೆ ಶನಿವಾರ ನಡೆದಿದೆ.
ಢಿಕ್ಕಿಯಾದ ರಭಸಕ್ಕೆ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಫರ್ಲಾ ನಿವಾಸಿ ಭುಜಂಗ ಮೂಲ್ಯ ಅವರ ಮನೆಗೆ ನುಗ್ಗಿ ಮನೆಯ ಗೋಡೆ ಹಾಗೂ ಮೇಲ್ಛಾವಣಿಯ ಹಂಚಿಗೆ ಹಾನಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಿಸ್ತರಣೆಯ ಸಂದರ್ಭ ಭುಜಂಗ ಮೂಲ್ಯ ಅವರ ಜಾಗವೂ ಹೆದ್ದಾರಿಗೆ ಹೋಗಿದ್ದು, ಆದರೆ ಅದರ ಪರಿಹಾರ ಮೊತ್ತ ಇನ್ನೂ ಅವರ ಕೈ ಸೇರಿಲ್ಲ ಎಂಬ ಆರೋಪ ಕೇಳಿಬಂದಿದೆ.