ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣದಲ್ಲಿ ಪ್ರಯಾಣಿಕರಿಬ್ಬರಿಂದ ಅಕ್ರಮ ಸಾಗಾಟದ 19,97,100 ರೂ. ಮೌಲ್ಯದ ಚಿನ್ನವನ್ನು ಸೀಝ್ ಮಾಡಿದ್ದಾರೆ. ಅಬುಧಾಬಿಯಿಂದ ಬುಧವಾರ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ಬ್ಯಾಗ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಕವರ್‌ನಲ್ಲಿ 24 ಕ್ಯಾರೆಟ್ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. 128 ಗ್ರಾಂ ತೂಕದ 8,06,400 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ರಸ್-ಅಲ್-ಖಯಾಮ್‌ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದ ವಿಮಾನದಲ್ಲಿದ್ದ ಪ್ರಯಾಣಿಕನನ್ನು ಬುಧವಾರ ತಪಾಸಣೆಗೆ ಒಳಪಡಿಸಲಾಯಿತು. ಆತನ ಟ್ರಾಲಿ ಬ್ಯಾಗ್‌ನಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಲಕೋಟೆಯಲ್ಲಿ ಅಡಗಿಸಿಡಲಾಗಿತ್ತು. ಆತನಿಂದ 11,90,700 ರೂ. ಮೌಲ್ಯದ ಚಿನ್ನ 189 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.