ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವೇಣೂರು ಶ್ರೀಬಾಹುಬಲಿ ಸ್ವಾಮಿಗೆ ನಾಳೆಯಿಂದ ಮಹಾಮಸ್ತಕಾಭಿಷೇಕ ಆರಂಭವಾಗಲಿದೆ. ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 3ಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧಾರ್ಮಿಕ ಸಭೆ ಉದ್ಘಾಟಿಸಲಿದ್ದಾರೆ. ಕ್ರಿಸ್ತಶಕ 1604ರಲ್ಲಿ ವೇಣೂರಿನ ಬಾಹುಬಲಿ ಮೂರ್ತಿ ಸ್ಥಾಪನೆಯಾಗಿದೆ. ಈ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ನಾಳೆಯಿಂದ ಮಾರ್ಚ್ 1ರವರೆಗೂ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಪ್ರತಿದಿನ ಸಂಜೆ 6.45ರಿಂದ ಶ್ರೀ ಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಸೀಯಾಳ, ಹಾಲು, ಕಲ್ಕರಸ, ಅರಶಿಣ ಕಷಾಯ, ಕೇಸರಿ, ರಕ್ತಚಂದನ ಮೊದಲಾದ ದ್ರವ್ಯಗಳಿಂದ ಅಭಿಷೇಕ ನೆರವೇರಲಿದೆ. ಪ್ರಥಮ ನಾಲ್ಕು ದಿನಗಳು 108 ಕಳಶ, ಬಳಿಕ ಮೂರು ದಿನ 216 ಕಲಶ, 8ನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಪ್ರತಿದಿನ ಸಂಜೆ 20 ಸಾವಿರ ಮಂದಿಗೆ ಅನ್ನಪ್ರಸಾದ ನಡೆಯಲಿದೆ.