ಪುತ್ತೂರು: ದೇರಳಕಟ್ಟೆಯ ಖಾಸಗಿ ಯುನಿರ್ವಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಪುತ್ತೂರಿನ ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಫೆ. 17 ರಂದು ಉಳ್ಳಾಲ ಠಾಣೆಗೆ ದೂರು ನೀಡಲಾಗಿದ್ದು, ಇದೀಗ ಆಕೆಯ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಹೆಚ್‌ಡಿ ಮಾಡಲು ಅನುಕೂಲವಾಗಲು ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಚೈತ್ರಾ ಅನ್ಯ ಕೋಮಿನ ಯುವಕನ ಜೊತೆ ಸಂಪರ್ಕದಲ್ಲಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪುತ್ತೂರಿನ ಅನ್ಯ ಕೋಮಿನ ಯುವಕನೊಬ್ಬ ಪಿಜಿಗೆ ಭೇಟಿ ನೀಡುತ್ತಿದ್ದ ಎಂಬ ಬಗ್ಗೆ ಮಾಡೂರಿನ ಬಜರಂಗದಳದ ಮುಖಂಡರು ಚೈತ್ರಾ ದೊಡ್ಡಪ್ಪನ ಗಮನಕ್ಕೆ ತಂದಿದ್ದರು. ಡ್ರಗ್ ಮಾಫೀಯಾ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳದ ಮುಖಂಡರು ಈ ಬಗ್ಗೆ ಎಚ್ಚರ ವಹಿಸುವಂತೆ ಚೈತ್ರಾ ದೊಡ್ಡಪ್ಪನ ಬಳಿ ಹೇಳಿದ್ದರು. ಇದಾದ ಬಳಿಕ ಚೈತ್ರಾ ನಾಪತ್ತೆಯಾಗಿದ್ದು, ಆಕೆ ಪುತ್ತೂರಿನ ಶಾರೂಕ್ ಶೇಖ್ ಎಂಬಾತನ ಜೊತೆ ಹೋಗಿರುವ ಬಲವಾದ ಅನುಮಾನ ಮೂಡಿದೆ. ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಶಾರೂಕ್ ಶೇಖ್ ಗೆ ಚೈತ್ರಾ ಪುತ್ತೂರಿನಲ್ಲೇ ಪರಿಚಿತಳಾಗಿರುವ ಸಾದ್ಯತೆ ಇದೆ. ಪುರುಷರಕಟ್ಟೆ ಹಾಗೂ ಕೂರ್ನಡ್ಕ ಸಮೀಪದ ಪ್ರದೇಶವಾಗಿದ್ದು, ಇಲ್ಲೇ ಇಬ್ಬರಿಗೂ ಪರಿಚಯವಾಗಿತ್ತು ಎಂದು ಅನುಮಾನ ವ್ಯಕ್ತವಾಗಿದೆ.ಐಟಿಟಿ ಕಲಿತಿದ್ದ ಶಾರೂಕ್ ಶೇಖ್ ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿದ್ದು ಕತಾರ್ ಜೈಲಿನಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಚೈತ್ರಾ ಹೆಬ್ಬಾರ್‌ಗೆ ಗಾಂಜಾದ ರುಚಿ ತೋರಿಸಿದ್ದ ಶಾರೂಕ್ ಶೇಖ್ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿರುವ ಅನುಮಾನ ಇದೆ. ಪಿಜಿಯಿಂದ ತೆರಳಿದ್ದ ಚೈತ್ರಾ ಹೆಬ್ಬಾರ್ ಸುರತ್ಕಲ್ ಎಟಿಎಂ ಒಂದರಿಂದ ಹಣ ಡ್ರಾ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಚೈತ್ರಾ ಅಕೌಂಟ್‌ನಲ್ಲಿ ಲಕ್ಷಾಂತರ ರೂಪಾಯಿ ಹಣ ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ ಪೊಲೀಸರು ಅಕೌಂಟ್ ಬ್ಲಾಕ್ ಮಾಡಿಸಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣವೆಂದು ಆರೋಪಿಸಿರುವ ಬಜರಂಗದಳ ಚೈತ್ರಾಳನ್ನು ಎರಡು ದಿನದಲ್ಲಿ ಪತ್ತೆ ಹಚ್ಚಲು ಪೊಲೀಸರಿಗೆ ಗಡುವು ನೀಡಿದೆ.