ಮಂಗಳೂರು: ಲೋಕಸಭಾ ಚುನಾವಣಾ ಪ್ರಣಾಳಿಕೆಗೆ ಬಿಜೆಪಿ ವಿವಿಧ ಸಲಹೆಗಳನ್ನು ಜನರಿಂದ ಪಡೆಯಲು ಉದ್ದೇಶಿಸಿದ್ದು, ಅದಕ್ಕಾಗಿ ‘ನಿಮ್ಮ ಸಲಹೆ ನಮ್ಮ ಗುರಿ’ ಎಂಬ ವಿನೂತನ ಪ್ರಯೋಗ ಆರಂಭಿಸಿದೆ. ದ.ಕ.ಜಿಲ್ಲೆಯಿಂದ 50ಸಾವಿರ ಸಲಹೆಗಳ ಗುರಿಯಿದೆ ಎಂದು ದ.ಕ.ಜಿಲ್ಲಾ ಲೋಕಸಭಾ ಚುನಾವಣಾ ಪ್ರಣಾಳಿಕಾ ಉಸ್ತುವಾರಿ ಸಿಎ ಶಾಂತರಾಂ ಶೆಟ್ಟಿ ತಿಳಿಸಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದಿನ ಪ್ರಣಾಳಿಕೆ ಹೇಳಿರುವ 95% ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಆದ್ದರಿಂದ ಈ ಬಾರಿಯ ಪ್ರಣಾಳಿಕೆಗೆ ಸಲಹೆಗಳನ್ನು ಪಡೆಯಲು ಶಾಲೆ, ಕಾಲೇಜು, ದೇವಸ್ಥಾನ, ಮಾಲ್ ಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇಡಲಾಗುತ್ತದೆ. ಅದಕ್ಕೆ ಜನರು ತಮ್ಮ ಸಲಹೆಗಳನ್ನು ಬರೆದು ಹಾಕಬಹುದು ಎಂದರು. ಅಲ್ಲದೆ ನಮೋ ಆ್ಯಪ್, ಮಿಸ್ ಕಾಲ್ ನೀಡಿ ಸಲಹೆ ನೀಡಲು ಅವಕಾಶವಿದೆ. 9090902024 ಸಂಖ್ಯೆಗೆ ಕರೆ ಮಾಡಬಹುದು. ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ವೈವಿಧ್ಯಮಯ ವಿಷಯಗಳಲ್ಲಿ ಸಲಹೆಗಳನ್ನು ನೀಡಬಹುದು. ಜೊತೆಗೆ ಪ್ರತೀ ಜಿಲ್ಲೆಗೆ ಎರಡು ಎಲ್ ಇಡಿ ವಾಹನಗಳು ಸಂಚರಿಸಲಿದ್ದು, ವಿಕಸಿತ ಭಾರತದ ಮೋದಿ ಗ್ಯಾರಂಟಿಯನ್ನು ಜಿಲ್ಲೆಯ ಮೂಲೆಮೂಲೆಗಳಿಗೆ ಕೊಂಡೊಯ್ಯಲಿದೆ. ಸಲಹೆ ಬಾಕ್ಸ್ ಅನ್ನು ಒಂದು ತಿಂಗಳಲ್ಲಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಸಿಎ ಶಾಂತರಾಮ್ ಶೆಟ್ಟಿ ಹೇಳಿದರು.