ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಪ್ರಾಂತೀಯ ಸೇನೆಯ ತೂಪುಲ್ ರೈಲ್ವೆ ನಿರ್ಮಾಣ ಕಾಮಗಾರಿ ಶಿಬಿರದ ಬಳಿ ಬೆಟ್ಟ ಕುಸಿದು ದುರಂತ ಸಂಭವಿಸಿದ್ದು, ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ.
ಅವರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.
ಜಿರಿಬಾಂಬ್‍ನಿಂದ ಇಂಫಾಲವರೆಗಿನ ರೈಲ್ವೆ ಹಳಿ ಕಾವಲಿಗೆ ನಿಯೋಜಿಸಲಾಗಿದ್ದ ಭಾರತೀಯ ಸೇನೆಯ 107 ಟೆರಿಟೋರಿಯಲ್ ಆರ್ಮಿ ಶಿಬಿರಕ್ಕೆ ಗುಡ್ಡಕುಸಿತದಿಂದ ವ್ಯಾಪಕ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಮತ್ತು ಎಸ್‍ಡಿಆರ್‍ಎಫ್ ಹೆಚ್ಚುವರಿ ತಂಡಗಳು ಸಿಲ್ವರ್ ಮತ್ತು ಕೊಯಮಾದಿಂದ ಆಗಮಿಸಿದ್ದು, ಸ್ಥಳೀಯ ಶೋಧನಾ ತಂಡಗಳ ಜತೆ ಕಾರ್ಯಾಚರಣೆ ಮುಂದುವರೆಸಿವೆ ಎಂದು ಉಪವಿಭಾಗಾಧಿಕಾರಿ ಸೋಲಮನ್ ಎಲ್.ಫಿಮೆಟ್ ಹೇಳಿದ್ದಾರೆ.
ಇದು ರಾಜ್ಯದ ಇತಿಹಾಸದಲ್ಲಿ ಭೀಕರ ಭೂ ಕುಸಿತದ ಪ್ರಕರಣವಾಗಿದ್ದು, 2ಕಿ.ಮೀ. ವ್ಯಾಪ್ತಿಯಲ್ಲಿ ಹರಡಿದೆ ಎಂದು ತಿಳಿಸಿದ್ದಾರೆ. ಇದುವರೆಗೂ 13 ಮಂದಿ ಸೇನಾ ಸಿಬ್ಬಂದಿ, 5 ಮಂದಿ ನಾಗರಿಕರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 29 ಮಂದಿ ನಾಗರಿಕರಿಗೆ ಶೋಧಕಾರ್ಯ ಮುಂದುವರೆಸಲಾಗಿದೆ.
ಈ ದುರಂತದಲ್ಲಿ 9 ಮಂದಿ ಯೋಧರೂ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.