ಮಂಗಳೂರು: ಪಾರ್ಟ್ ಟೈಮ್ ಜಾಬ್ ಆಮಿಷವೊಡ್ಡಿ 1.15 ಲಕ್ಷ ರೂ. ಲಪಟಾಯಿಸಿರುವ ಪ್ರಕರಣದಲ್ಲಿ ಮಂಗಳೂರು ಪೊಲೀಸರು ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಜೋಧಪುರ ಜಿಲ್ಲೆಯ ಮುಸಲ್ಮಾನ್ ಕಾ ಬಾವುರಿ, ರಾಮ್ ದೇವ್ ಮಂದಿರ ಹತ್ತಿರದ ನಿವಾಸಿ ಸದ್ದಾಂ ಗೌರಿ ಅಲಿಯಾಸ್ ಬಾವುರಿ (30) ಬಂಧಿತ ಆರೋಪಿ. ಈತ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ವಾಟ್ಸ್ಆಪ್ ಗೆ ಲಿಂಕ್ ಕಳುಹಿಸುತ್ತಾನೆ. ಈ ಲಿಂಕ್ ಮೂಲಕ ಹಣ ತೊಡಗಿಸಿ, ಟಾಸ್ಕ್ ಕಂಪ್ಲಿಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿದ್ದಾನೆ. ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸೆನ್ ಠಾಣಾ ಪೊಲೀಸರು, ಆರೋಪಿಯನ್ನು ಜೋಧಪುರ್ ಜಿಲ್ಲೆಯ ಬಾವುರಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್ ಗಳು, ಎಂಟು ಡೆಬಿಟ್ ಕಾರ್ಡ್, ನಾಲ್ಕು ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ ಸೊತ್ತುಗಳನ್ನು ವಶಪಡಿಸಲಾಗಿದೆ.