ಮಂಗಳೂರು: ದ.ಕ.ಜಿಲ್ಲೆಯಲ್ಲಸದ್ಯ ಕುಡಿಯುವ ನೀರು ಲಭ್ಯತೆಯಿದ್ದು, ಸದ್ಯ ರೇಷನಿಂಗ್ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ಆದರೆ ಸಾರ್ವಜನಿಕರು ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿಯ ಮೂರು ಡ್ಯಾಂಗಳಲ್ಲಿ ಇರುವ ನೀರಿನ ಮಟ್ಟವನ್ನು ಪ್ರತಿದಿನ ಅವಲೋಕನ ಮಾಡಲಾಗುತ್ತಿದೆ. ಅದರಂತೆ ನೀರಿನ ರೇಷನಿಂಗ್ ಮಾಡುವ ಅಗತ್ಯ ಕಂಡು ಬಂದಿಲ್ಲ. ತುಂಬೆ ಡ್ಯಾಂನಲ್ಲಿ 5.48 ಮೀಟರ್, ಎಎಂಆರ್ ಡ್ಯಾಂನಲ್ಲಿ 17.6 ಮೀ, ಬಿಳಿಯೂರು ಡ್ಯಾಂನಲ್ಲಿ 1.95 ಮೀಟರ್ ನೀರು ಲಭ್ಯವಿದೆ. ತುಂಬೆ ಡ್ಯಾಂನ ಮಟ್ಟ 5 ಮೀಟರ್ ಗೆ ಇಳಿದಾಗ ಎಎಂಆರ್‌ನಿಂದ ನೀರು ಬಿಡಲಾಗುವುದು, ಎಎಂಆರ್ ಡ್ಯಾಂನಲ್ಲಿ 16 ಮೀಟರ್‌ಗೆ ಇಳಿದಾಗ ಬಿಳಿಯೂರು ಡ್ಯಾಂನಿಂದ ನೀರು ಬಿಡಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಕೈಗಾರಿಕೆಗಳಿಗೆ ಕೊಡುವ ನೀರಿನ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡಲಾಗಿದೆ. ಮಂಗಳೂರು ಮನಪಾ ವ್ಯಾಪ್ತಿಗೆ ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ 6 ಮೀ. ನೀರು ಸುಮಾರು 50 ದಿನಗಳಿಗೆ ಪೂರೈಕೆ ಮಾಡಬಹುದು. ಉಳ್ಳಾಲ ಗ್ರಾಮೀಣ ಭಾಗದ ಬಾಳೆಪುಣಿ, ಕೋಣಾಜೆ, ನರಿಂಗಾನ, ಪಜೀರು, ಮಂಜನಾಡಿ ಪ್ರದೇಶಗಳಿಗೆ 9 ಟ್ಯಾಂಕರ್ ಗಳ ಮೂಲಕ ದಿನಕ್ಕೆ 30 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 9 ಟ್ಯಾಂಕರ್ ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.