ಶ್ರೀ ಕ್ಷೇತ್ರ ಧರ್ಮಸ್ಥಳದ 2024ರ ಕಾಲಾವಧಿ ಜಾತ್ರೆಯು ಏಪ್ರಿಲ್ 12 ಶುಕ್ರವಾರದಿಂದ ಏಪ್ರಿಲ್ 24 ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ.
2024ರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಧಾರ್ಮಿಕ ಕಾರ್ಯಕ್ರಮಗಳ ವಿವರ ಸೇರಿದಂತೆ ಇತರ ಮಾಹಿತಿಯೊಳಗೊಂಡ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗಾಗಿ ಕೆಲವು ಮುಖ್ಯವಾದ ಮಾಹಿತಿಯನ್ನು ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಲಾವಧಿ ಜಾತ್ರೆಯ ಸಮಯದಲ್ಲಿ ಕ್ಷೇತ್ರಕ್ಕೆ ತೆರಳುವವರು ಈ ವಿಚಾರವನ್ನು ತಿಳಿದಿರಬೇಕಾಗಿದೆ.
ಏಪ್ರಿಲ್ 18ರಿಂದ ಏಪ್ರಿಲ್ 23ರವರೆಗೆ ಬೆಳಗ್ಗೆ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸಾಯಂಕಾಲ 5 ಗಂಟೆಯಿಂದ 8:30ರವರೆಗೆ ಮಾತ್ರ ಭಕ್ತರನ್ನು ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 18ರಿಂದ ಏಪ್ರಿಲ್ 23ರವರೆಗೆ ಮುಂಜಾನೆಯ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಧಾರ್ಮಿಕ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ
ಏಪ್ರಿಲ್ 12- ರಾತ್ರಿ 8:30ರಿಂದ ಓಲೆ ಬರೆಯುವುದು
ಏಪ್ರಿಲ್ 13- ಸಂಜೆ 6 ಗಂಟೆಗೆ ಪಯ್ಯೋಳಿ ಹೋಗುವುದು, ರಾತ್ರಿ 7:30ಕ್ಕೆ ಧ್ವಜಾರೋಹಣ, ರಾತ್ರಿ 10 ಗಂಟೆಗೆ ಧರ್ಮ ದೈಬಗಳ ಭಂಡಾರ ಹೊರಡುವುದು.
ಏಪ್ರಿಲ್ 14- ರಾತ್ರಿ 10 ಗಂಟೆಯ ನಂತರ ಧರ್ಮ ದೈವಗಳ ನೇಮ
ಏಪ್ರಿಲ್ 15- ರಾತ್ರಿ 8 ಗಂಟೆಯಿಂದ ಅಣ್ಣಪ್ಪ ನೇಮ
ಏಪ್ರಿಲ್ 16- ಉತ್ಸವ
ಏಪ್ರಿಲ್ 17- ರಾತ್ರಿ 8:30ಕ್ಕೆ ಬಯಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ರಜತಲಾಲಕಿಯಲ್ಲಿ ಹೊಸಕಟ್ಟೆಗೆ(ವಸಂತ ಮಹಲ್)
ಏಪ್ರಿಲ್ 18- ಬೆಳಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ,
ಏಪ್ರಿಲ್ 19- ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಲಲಿತೋದ್ಯಾನ ಉತ್ಸವ
ಏಪ್ರಿಲ್ 20-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಕೆರೆಕಟ್ಟೆ ಉತ್ಸವ
ಏಪ್ರಿಲ್ 21-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಚಂದ್ರಮಂಡಲ ಗೌರಿ ಮಾರುಕಟ್ಟೆ ಉತ್ಸವ
ಏಪ್ರಿಲ್ 22- ಬೆಳಗ್ಗೆ ರಥೋತ್ಸವ, ದರ್ಶನ ಬಲಿ, ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಬ್ರಹ್ಮರಥೋತ್ಸವ, ಭೂತ ಬಲಿ
ಏಪ್ರಿಲ್ 23: ಬೆಳಗ್ಗೆ 9 ಗಂಟೆಗೆ ಕವಾಟೋಧ್ಘಾಟನೆ, ರಾತ್ರಿ 6 ಆರು ಗಂಟೆ ನಂತರ ದರ್ಶನ ಬಲಿ, ಧ್ವಜ ಅವಾರೋಹಣ
ಏಪ್ರಿಲ್ 24: ರಾತ್ರಿ 8:30ರಿಂದ ಧೂಳ ಬಲಿ ಉತ್ಸವ ನಡೆಯಲಿದೆ.