ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರಕ್ಕೆ ವಿಶ್ವಾಸಮತ ಯಾಚನೆಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ವಿಧಾನಸಭೆ ಸ್ಪೀಕರ್ ಆಯ್ಕೆ ನಡೆದಿದೆ. ರಾಹುಲ್ ನಾರ್ವೇಕರ್ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಹುಲ್ ನಾರ್ವೇಕರ್ ಅವರ ಹೆಸರನ್ನು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರು ನಾಮ ನಿರ್ದೇಶನ ಮಾಡಿದರು. ಬಳಿಕ ನಡೆದ ಚುನಾವಣೆಯಲ್ಲಿ 164 ಮತ ಪಡೆದು ನಾರ್ವೇಕರ್ ಸ್ಪೀಕರ್ ಹುದ್ದೆಗೇರಿದರು. ಶಿವಸೇನೆಯ ರಾಜನ್ ಸಾಲ್ವಿ 107 ಮತಗಳೊಂದಿಗೆ ಪರಾಭವಗೊಂಡರು. ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು.
2021ರ ಫೆಬ್ರವರಿಯಲ್ಲಿ ಕಾಂಗ್ರೆಸ್‌ನ ನಾನಾ ಪಟೋಲ್ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಹುದ್ದೆಗೆ ಈಗ ಆಯ್ಕೆ ನಡೆದಿದ್ದು, ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲ್ ಅವರು ಅಧಿಕಾರ ಹಸ್ತಾಂತರಿಸಿದರು. ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಶಿವಸೇನೆಯ ಯುವ ಘಟಕದಲ್ಲಿ ವಕ್ತಾರರಾಗಿ ಕೆಲಸ ಮಾಡಿದ ಅನುಭವ ನಾರ್ವೇಕರ್ ಅವರಿಗಿದೆ. 2014ರಲ್ಲಿ ಶಿವಸೇನೆ ತೊರೆದು ಎನ್‌ಸಿಪಿ ಸೇರಿದ್ದರು. ಬಳಿಕ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಏಕನಾಥ ಶಿಂಧೆ ಅವರು ಸೋಮವಾರ ಬಹುಮತ ಸಾಬೀತುಪಡಿಸಲು ವಿಶ್ವಾಸಮತಯಾಚನೆ ಮಾಡಬೇಕು. ಇದಕ್ಕೂ ಮುನ್ನವೇ ಸ್ಪೀಕರ್ ಆಯ್ಕೆ ನಡೆದಿದ್ದು, ನೂತನ ಸ್ಪೀಕರ್ ಅವರೇ ವಿಶ್ವಾಸಮತಯಾಚನೆ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.