ಸುರತ್ಕಲ್ : ಕಡಲಿನಲ್ಲಿ ಎಂಜಿನ್ ವೈಫಲ್ಯಕ್ಕೀಡಾಗಿ ಅಪಾಯಕ್ಕೆ ಸಿಲುಕಿದ್ದ ಕಾರವಾರ ಮೂಲದ ವ್ಯಕ್ತಿಗೆ ಸೇರಿದ್ದ ಮೀನುಗಾರಿಕೆ ದೋಣಿಯನ್ನು ಪಣಂಬೂರು ಕೇಂದ್ರೀಯ ಕೋಸ್ಟ್ ಗಾರ್ಡ್ ಕಣ್ಗಾವಲಿನಲ್ಲಿರುವ ಸಾವಿತ್ರಿಬಾಯಿ ಪುಲೆ ನೌಕೆ ಮಂಗಳವಾರ ಪತ್ತೆ ಹಚ್ಚಿ ಮೀನುಗಾರರ ಸಹಿತ ದೋಣಿಯನ್ನು ರಕ್ಷಿಸಿದೆ. ಏಪ್ರಿಲ್ 14ರಂದು ತೆರಳಿದ್ದ ಆಳ ಸಮುದ್ರ ಮೀನುಗಾರಿಕೆಗೆ ದೋಣಿ ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ದೋಣಿಯ ಸಿಬ್ಬಂದಿ ಕರೆ ಮಾಡಿ ನೆರವನ್ನು ಕೋರಿದ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲಾ ಮೀನುಗಾರಿಕೆ ಇಲಾಖೆಯು ನೆರವಿಗೆ ಧಾವಿಸುವಂತೆ ಕೋಸ್ಟ್ ಗಾರ್ಡ್ ಗೆ ಸೂಚಿಸಿತ್ತು. ಕಾರ್ಯಾಚರಣೆಗಿಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಯನ್ನು ತಾಂತ್ರಿಕ ಸಹಾಯವನ್ನು ಒದಗಿಸಿ ಹಡಗನ್ನು ಸುರಕ್ಷಿತವಾಗಿ ಕಾರವಾರ ಬಂದರಿಗೆ ಎಳೆದು ತಂದು ಮಾಲಕರಿಗೆ ಹಸ್ತಾಂತರಿಸಿದ್ದಾರೆ.