ಮಂಗಳೂರು: ಹೆಬ್ಬಾವುವೊಂದರ ದೇಹದಲ್ಲಿ ಬರೋಬ್ಬರಿ 11 ಏರ್ ಬುಲ್ಲೆಟ್ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಹೆಬ್ಬಾವು ಸಂಚಾರವಿದ್ದು, ಮಂಗಳೂರಿನ ಆನೆಗುಂಡಿ ಬಳಿ ಹೆಬ್ಟಾವೊಂದು ಪರ್ಶಿಯನ್ ಬೆಕ್ಕನ್ನು ತಿಂದು ನುಂಗಲಾರದೆ ಸಂಕಷ್ಟಪಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿದರು.
ಆಗ ಹೆಬ್ಬಾವಿನ ದೇಹ ತಪಾಸಣೆಗೆ ಒಳಪಡಿಸಿದಾಗ ದೇಹದಲ್ಲಿ 11 ಬುಲ್ಲೆಟ್ ಪತ್ತೆಯಾಯಿತು.
ಹೆಬ್ಬಾವು ಪರ್ಶಿಯನ್ ಕ್ಯಾಟ್ ತಿನ್ನುವಾಗ ಅದರ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿ ನುಂಗಲಾರದೆ ಕಷ್ಟಪಡುತ್ತಿತ್ತು. ಉರಗತಜ್ಞ ಭುವನ್ ದೇವಾಡಿಗ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಬಳಿಕ ಬಲೆ ತೆರವು ಮಾಡಿ ಹೆಬ್ಬಾವು ರಕ್ಷಿಸಲಾಯಿತು.
ಪಶುವೈದ್ಯ ಡಾ| ಯಶಸ್ವಿ ಅವರಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆಂದು ಎಕ್ಸ್‌ರೇ ಮಾಡಿಸಿದಾಗ ದೇಹದಲ್ಲಿ 11 ಏರ್ ಬುಲ್ಲೆಟ್ ಪತ್ತೆಯಾಯಿತು. ಸುಮಾರು ವರ್ಷಗಳ ಹಿಂದೆಯೇ ಈ ಹೆಬ್ಟಾವಿಗೆ ಏರ್‌ಗನ್‌ನಿಂದ ಶೂಟ್ ಮಾಡಿರಬಹುದು. ಇದೇ ಕಾರಣಕ್ಕೆ ಕೆಲವೊಂದು ಬುಲೆಟ್‌ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲ್ಲೆಟ್‌ಗಳನ್ನು ಸದ್ಯ ಹೊರತೆಗೆಯಲಾಗಿದೆ. ಸದ್ಯ ಹೆಬ್ಬಾವು ಚೇತರಿಸಿಕೊಳ್ಳುತ್ತಿದೆ ಎಂದು ಉರಗ ತಜ್ಞ ಭುವನ್ ದೇವಾಡಿಗ ತಿಳಿಸಿದ್ದಾರೆ.