ಪುತ್ತೂರು: ಮತದಾನ ಪ್ರಕ್ರಿಯೆ ಗೌಪ್ಯವಾಗಿ ಆಗಬೇಕಾದದ್ದು ನಿಯಮ. ಆದರೆ ಮತದಾನ ಮಾಡುತ್ತಿರುವ ದೃಶ್ಯವನ್ನು ಮತದಾರನಿಬ್ಬ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ಶುಕ್ರವಾರ ನಡೆದಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪುತ್ತೂರು ತಾಲೂಕಿನ ಮತಗಟ್ಟೆಯೊಂದರಲ್ಲಿ ತಾನು ಮತದಾನ ಮಾಡುತ್ತಿದ್ದ ಫೋಟೊವನ್ನು ಕ್ಲಿಕ್ಕಿಸಿ ಯುವಕನೋರ್ವನು ವೈರಲ್ ಮಾಡಿದ್ದ. ಮತಗಟ್ಟೆಯೊಳಗೆ ಮೊಬೈಲ್ ಫೋನ್ ಒಯ್ಯುವುದು ನಿಷೇಧವಿದ್ದರೂ, ಈತ ಮೊಬೈಲ್ ಕೊಂಡೊಯ್ದಿದ್ದ. ಮತದಾನ ಮಾಡುವ ದೃಶ್ಯವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾನೆ. ಪುತ್ತೂರು ವಿಧಾನಸಭಾ ಕ್ಷೇತ್ರ – 206ರ ಮತಗಟ್ಟೆ ಸಂಖ್ಯೆ 147ರಲ್ಲಿ ಮತದಾನ ಮಾಡಿರುವ, ಆರ್ಯಾಪು, ಪುತ್ತೂರು ತಾಲೂಕು ನಿವಾಸಿ ರಂಜಿತ್ ಬಂಗೇರ ಎಂಬಾತ ತನ್ನ ಮತದಾನ ಮಾಡುವಾಗ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದ. ಈ ಬಗ್ಗೆ ಫ್ಲಯಿಂಗ್ ಸ್ಕ್ವಾಡ್ -2 ರ ಉಸ್ತುವಾರಿ ಅಧಿಕಾರಿಗಳ ನೀಡಿದ ದೂರಿನ ಮೇರೆಗೆ, ಕಲಂ:171 (ಎಫ್), 188 ಭಾರತೀಯ ದಂಡ ಸಂಹಿತೆ ಮತ್ತು ಕಲಂ: 123 ಪ್ರಜಾಪ್ರತಿನಿಧಿ ಕಾಯ್ದೆ 1951 ಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.