ಮಂಗಳೂರು: ಕೋವಿಡ್-ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರಲ್ಲಿ ರದ್ದಾಗಿದ್ದ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ನಾಲ್ಕು ವರ್ಷದ ಬಳಿಕ ಗುರುವಾರ ಸಂಜೆ ನಗರದ ಹಳೆಯ ಬಂದರಿಗೆ ಆಗಮಿಸಿದೆ.
ಗುರುವಾರ ಬೆಳಗ್ಗೆ 7 ಗಂಟೆಗೆ ಲಕ್ಷದ್ವೀಪದ ಕದ್ಮತ್ ದ್ವೀಪದಿಂದ ಪ್ರಯಾಣ ಆರಂಭಿಸಿದ ಕೊಚ್ಚಿಯ ‘ಪರೊಲಿ’ ಎಂಬ ಹೆಸರಿನ ಹಡಗು ಅಲ್ಲಿನ ಮತ್ತೊಂದು ದ್ವೀಪಕ್ಕೆ ತಲುಪಿದೆ. ಬಳಿಕ ಅಲ್ಲಿಂದ 8:15ಕ್ಕೆ ಪ್ರಯಾಣ ಆರಂಭಿಸಿದ ಹಡಗು ಸಂಜೆ 4ಕ್ಕೆ ಮಂಗಳೂರು ಬಂದರು ಹೊರವಲಯಕ್ಕೆ ತಲುಪಿ ಲಂಗರು ಹಾಕಿತು.
ಹಳೆಯ ಬಂದರ್‌ನಲ್ಲಿ ಹಡಗೊಂದು ಸರಕು ತುಂಬಿಸಿಕೊಳ್ಳುತ್ತಿದ್ದ ಕಾರಣ ಮಂಗಳೂರು ಹಳೆಯ ಬಂದರು ಪ್ರವೇಶಿಸಲು ‘ಪರೊಲಿ’ ಹಡಗು ಸಂಜೆ 4:30ರ ತನಕ ಕಾಯಬೇಕಾಯಿತು. ಕೊನೆಗೂ ಸಂಜೆ ಸುಮಾರು 4:45ಕ್ಕೆ ಹಳೆಯ ಬಂದರು ತಲುಪಿದೆ. ಈ ಹಡಗು ಶನಿವಾರ ಮುಂಜಾನೆ ಮರಳಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ.