ಮಂಗಳೂರು: ನಗರದ ಕಂಟ್ರಾಕ್ಟರ್ ದಾರೊಬ್ಬರಿಗೆ ಸಿಬಿಐ ಅಧಿಕಾರಿಯ ಸೋಗಿನಲ್ಲಿ ಅಪರಿಚಿತರು ಫೋನ್ ಕರೆ ಮಾಡಿ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಲಪಟಾಯಿಸಿದ್ದಾನೆ ಎಂದು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಟ್ಟಾರ ನಿವಾಸಿ 65 ವರ್ಷದ ಕಂಟ್ರಾಕ್ಟರ್ ಒಬ್ಬರಿಗೆ ಎಪ್ರಿಲ್ 25ರಂದು ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಆತ “ತಮ್ಮ ಮೊಬೈಲ್ ನಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ಹೇಳಿದ್ದು, ಮೊಬೈಲ್ ಸಂಖ್ಯೆಯನ್ನು ಅಮಾನತು ಮಾಡಬೇಕಾಗುತ್ತದೆ. ನಿಮ್ಮ ಮೇಲೆ ಮುಂಬೈ ಸಿಬಿಐ ಕಚೇರಿಯಲ್ಲಿ ಕೇಸ್ ದಾಖಲಾಗಿದೆ ಎಂದು ಹೇಳಿದ್ದಾನೆ. ಬಳಿಕ, ಕರೆಯನ್ನು ಸಿಬಿಐ ಅಧಿಕಾರಿಗೆ ವರ್ಗಾಯಿಸುತ್ತೇನೆಂದು ಹೇಳಿ ಮತ್ತೊಬ್ಬ ವ್ಯಕ್ತಿ ಮಾತನಾಡಿದ್ದಾರೆ. ಸಿಬಿಐ ಅಧಿಕಾರಿಯ ಹೆಸರಲ್ಲಿ ಮಾತನಾಡಿದ್ದ ವ್ಯಕ್ತಿ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣದ ಅವ್ಯವಹಾರ ಆಗಿದ್ದು ಖಾತೆಯನ್ನು ಮುಟ್ಟುಗೋಲು ಹಾಕಲಾಗುತ್ತದೆ ಎಂದಿದ್ದಾನೆ. ಆದ್ದರಿಂದ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಅಲ್ಲದೆ, ಸೈಪ್ ಏಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಹೇಳಿ ಕಂಟ್ರಾಕ್ಟರ್ ರಿಗೆ ಪ್ರತ್ಯೇಕ ನೋಟಿಸ್ ಕಳಿಸಿ ಬೆದರಿಸಿದ್ದರು. ಬಳಿಕ, ನೀವು ನಮ್ಮೊಂದಿಗೆ ಸಹಕರಿಸಿದರೆ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ಹೇಳಿ ಬ್ಯಾಂಕ್ ಖಾತೆಯ ನಂಬರ್ ಕಳಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಕೇಸಿನಿಂದ ಬಚಾವ್ ಆಗುವ ಆಸೆಯಲ್ಲಿ ಸದ್ರಿ ಖಾತೆಗೆ ಮೊದಲು 2.99 ಲಕ್ಷ ರೂ. ಹಣವನ್ನು ಕಂಟ್ರಾಕ್ಟರ್ ವ್ಯಕ್ತಿ ಹಾಕಿದ್ದರು. ಬಳಿಕ, ಸೈಬರ್ ಕಳ್ಳರು ವಿವಿಧ ಬ್ಯಾಂಕ್ ಖಾತೆಗಳನ್ನು ಕಳಿಸಿ ಹಣಕ್ಕಾಗಿ ಪೀಡಿಸಿದ್ದರು. ಒಟ್ಟು 15,01,049 ರೂ. ಹಣವನ್ನು ತನ್ನ ಐಸಿಸಿಐ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಮೇ 3ರಂದು ಕಂಟ್ರಾಕ್ಟರ್ ವ್ಯಕ್ತಿ ಮಂಗಳೂರಿನ ಸೈಬರ್ ಠಾಣೆಗೆ ಬಂದು ದೂರು ನೀಡಿದ್ದಾರೆ.