ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ಪಶು ವೈದ್ಯನೋರ್ವ ಹಲ್ಲೆ ನಡೆಸಿದ ಪರಿಣಾಮ ಸ್ಥಳೀಯ ನಿವಾಸಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಸಂಭವಿಸಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಪಶು ವೈದ್ಯ ಕುಮಾರ್ ಎಂದು ಗುರುತಿಸಲಾಗಿದೆ. ಪಟ್ರಮೆ ಗ್ರಾಮದ ಮೈಕೆ ನಿವಾಸಿ ಕೃಷ್ಣ ಯಾನೆ ಕಿಟ್ಟ (55) ಮೃತರು ಎಂದು ಗುರುತಿಸಲಾಗಿದೆ.
ಅನಾರೋಗ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮೇ 13ರಂದು ಕೊಕ್ಕಡಕ್ಕೆ ಬಂದ ಕೃಷ್ಣ ಅವರಿಗೆ ಅಲ್ಲೇ ಕುಡಿದ ಮತ್ತಿನಲ್ಲಿದ್ದ ಕೊಕ್ಕಡದ ಪಶು ವೈದ್ಯ ಕುಮಾರ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಅಸ್ವಸ್ಥಗೊಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.