ಉಡುಪಿ: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಎಗರಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿಗಳಾದ ಶ್ರೀವತ್ಸ ಮತ್ತು ಗಣೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುದರ್ಶನ್ ದೊಡ್ಡಮನಿ ಅವರು ಸಿಬಂದಿ ಸತೀಶ್ ಅವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆ ಹೋಗುತ್ತಿರುವಾಗ ಓರ್ವ ವ್ಯಕ್ತಿ ತನ್ನ ಬೈಕ್‌ನಲ್ಲಿ ಕಲ್ಸಂಕ ಕಡೆಗೆ ಹೆಲ್ಮೆಟ್ ಧರಿಸದೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಚಲಾಯಿಸುತ್ತಿದ್ದ. ನಿಲ್ಲಿಸುವಂತೆ ಸೂಚಿಸಿದಾಗ ಆತ ವೈನ್‌ಗೇಟ್ ಬಳಿ ಹೋಗಿ ನಿಲ್ಲಿಸಿದ್ದಾನೆ. ಬಳಿಕ ಆತನಿಗೆ ದಂಡ ಕಟ್ಟುವಂತೆ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಆತ “ನೀವು ನೋಟೀಸ್ ನೀಡಿ’ ಎಂದು ಹೇಳಿದ್ದಾನೆ. ಅದಕ್ಕೆ ಪೊಲೀಸರು ನಿಮ್ಮ ಮನೆಯ ವಿಳಾಸ ಹೊಂದಿರುವ ಯಾವುದಾದರೊಂದು ದಾಖಲೆ ತೋರಿಸಲು ಕೇಳಿಕೊಂಡಾಗ ವಾಹನ ಸವಾರ ನಿರಾಕರಿಸಿದ್ದಾನೆ. ಇದೇ ವೇಳೆ ಬುಲೆಟ್‌ನಲ್ಲಿ ಮತ್ತೊಬ್ಬ ಆರೋಪಿ ಬಂದು “ದಂಡ ಹಾಕುತ್ತೀಯಾ’ ಎಂದು ಏರು ಧ್ವನಿಯಲ್ಲಿ ಮಾತನಾಡಿ ಗದ್ದಲ ಮಾಡತೊಡಗಿದ. ಬಳಿಕ ಇಬ್ಬರೂ ಆರೋಪಿಗಳು ಸೇರಿ “ನಾವು ಕಾನೂನು ವಿದ್ಯಾರ್ಥಿಗಳು; ನಮಗೂ ಕಾನೂನು ಗೊತ್ತು ಎಂದು ವೀಡಿಯೋ ಮಾಡುತ್ತಾ ಮೊಬೈಲ್ ಅನ್ನು ಪೊಲೀಸರ ಮುಖದ ಹತ್ತಿರ ಹಿಡಿದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.