ಬಂಟ್ವಾಳ : ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ತಂಡವನ್ನು ಭೇದಿಸಿದ್ದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಕೇರಳದಲ್ಲಿ ಸ್ವಾಧೀನದಲ್ಲಿಟ್ಟು ಕೊಂಡಿದ್ದ ಒಟ್ಟು 506 ನೋಟುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 10 ರಂದು ಬಿ.ಸಿ.ರೋಡಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ ನೇತೃತ್ವದ ಪೋಲೀಸರ ತಂಡ ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದರು.
ಕಾಸರಗೋಡಿನ ಕೂಡ್ಲು ಗ್ರಾಮದ ಚೂರಿ ನಿವಾಸಿಗಳಾದ ಮೊಹಮ್ಮದ್ ಸಿ.ಎ.(61) ಹಾಗೂ ಕಮರುನ್ನೀಸಾ (41) ಬಂಧಿತ ಆರೋಪಿಗಳಾಗಿದ್ದು, ಪೊಲೀಸ್ ಕಾರ್ಯಾಚರಣೆ ವೇಳೆ ಇನ್ನೋರ್ವ ಆರೋಪಿ ಶರೀಫ್ ಪರಾರಿಯಾಗಿದ್ದನು. ಆರೋಪಿಗಳಿಂದ 500 ರೂ. ಮುಖ ಬೆಲೆಯ 46 ಖೋಟಾ ನೋಟುಗಳು, 5,300 ರೂ.ನಗದು ಹಾಗೂ 3 ಮೊಬೈಲ್, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದು, ಕೇರಳದಲ್ಲಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ಒಟ್ಟು 2,30,000/- ರೂಪಾಯಿ ಮೌಲ್ಯದ 500/- ರೂಪಾಯಿಯ 460 ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಹಿಂದಿನ ನೋಟುಗಳು ಸೇರಿ ಒಟ್ಟು ವಶಪಡಿಸಿಕೊಂಡ ನೋಟುಗಳ ಸಂಖ್ಯೆ 506 ಆಗಿದೆ.
ಆರೋಪಿಗಳು ಕೇರಳದಿಂದ ಖೋಟಾ ನೋಟುಗಳನ್ನು ತಂದು ಬಿ.ಸಿ.ರೋಡು ಭಾಗದ ಸಣ್ಣ ಅಂಗಡಿಗಳಿಗೆ ತೆರಳಿ ವಿನಿಮಯ ಮಾಡುತ್ತಿರುವ ಸತ್ಯವನ್ನು ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದರು. ಇಲ್ಲಿನ ಸಣ್ಣ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಕಡಿಮೆ ಬೆಲೆಯ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ 500 ರೂ. ಮುಖ ಬೆಲೆಯ ಖೋಟಾ ನೋಟುಗಳನ್ನು ನೀಡುತ್ತಿದ್ದರು. ಬಳಿಕ ಅವರಿಂದ ಬಾಕಿ ಮೊತ್ತವನ್ನು ಪಡೆದು ಅಲ್ಲಿಂದ ಪರಾರಿಯಾಗುತ್ತಿದ್ದರು. ಹೀಗೆ ಹಲವು ಭಾಗಕ್ಕೆ ತೆರಳಿ ತಮ್ಮಲ್ಲಿರುವ ಖೋಟಾ ನೋಟುಗಳನ್ನು ಚಲಾವಣೆ ಮಾಡುವ ಯೋಜನೆ ಅವರದ್ದಾಗಿತ್ತು. ಸಾರ್ವಜನಿಕರ ಮಾಹಿತಿಯಂತೆ ಬಂಟ್ವಾಳ ನಗರ ಪೊಲೀಸರು ಖೋಟಾ ನೋಟು ದಂಧೆಯನ್ನು ಭೇದಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್ಪಿಗಳಾದ ಜಗದೀಶ್, ರಾಜೇಂದ್ರ ಕೆ.ವಿ., ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಹಾಗೂ ರಾಮಕೃಷ್ಣ, ಸಿಬ್ಬಂದಿಗಳಾದ ರಾಜೇಶ್ ಎಸ್, ಇರ್ಷಾದ್ ಪಿ , ಮನೋಹರ, ಗಣೇಶ್, ಮೋಹನ್, ಬಸವರಾಜ್ ಕಮ್ಮಾರ್, ರಂಗನಾಥ್, ಕುಮಾರಿ ಅರ್ಪಿತಾ ರವರು ಕಾರ್ಯಚರಣೆಯಲ್ಲಿ ಸಹಕರಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರವರು, ಪತ್ತೆ ತಂಡವನ್ನು ಪ್ರಶಂಸಿಸಿದ್ದು, ನಗದು ಬಹುಮಾನವನ್ನು ಘೋಷಿಸಿರುತ್ತಾರೆ.