ಬೆಂಗಳೂರು: ಮುಸ್ಲಿಂ ಜನಾಂಗದ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಇದೇ ಜುಲೈ 10ರಂದು ರಾಜ್ಯದಾದ್ಯಂತ ಆಚರಿಸಲಾಗುವುದು. ಹಬ್ಬವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಕೆಲ ಕಾನೂನು ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.
ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿ ನೆರವೇರಿಸಬೇಕು. ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ ಆವರಣಗಳಲ್ಲಿ ಖುರ್ಬಾನಿಯನ್ನು ನಿಷೇಧಿಸಲಾಗಿದೆ. ಸ್ಥಳೀಯಾಡಳಿತ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿ ನೆರವೇರಿಸಬೇಕು.
ಖುರ್ಬಾನಿ ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಬೇಕು. ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ಪೊಲೀಸ್ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯ ಸೇವೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಹಾಗೂ ಸ್ಥಳೀಯವಾಗಿ ನೀಡುವ ನಿರ್ದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು