ಮಂಗಳೂರು: ಗಡಿ ಭಾಗದ ಕಾಸರಗೋಡು ಮೊಗ್ರಾಲ್ ಪುತ್ತೂರು ಪೇಟೆಯ ಮಸೀದಿ ಪರಿಸರದ ಫೈಝಲ್ ಮಂಜಿಲ್ನ ಇಬ್ರಾಹಿಂ ಅವರ ಮನೆಯಿಂದ ನಡೆದ ಕಳವು ಪ್ರಕರಣಕ್ಕೆ ದೊಡ್ಡ ತಿರುವು ಲಭಿಸಿದೆ. ಕಳವುಗೈಯ್ಯಲಾಗಿದೆ ಎಂದು ಹೇಳಲಾದ 18.63 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು ಮನೆಯೊಳಗೇ ಭದ್ರವಾಗಿ ಪತ್ತೆಯಾಗಿವೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಎಲ್ಲ ಕವಾಟುಗಳನ್ನು ಒಡೆದು ಅದರೊಳಗಿದ್ದ ಸಾಮಗ್ರಿಗಳನ್ನೆಲ್ಲವನ್ನೂ ಹೊರಕ್ಕೆ ಎಸೆದು ಚೆಲ್ಲಾಪಿಲ್ಲಿಗೊಳಿಸಿದ್ದರು. ಆ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಹಾಗು ಬೆರಳ ಗುರುತು ತಜ್ಞರು ಮ ಚೆಲ್ಲಾಪಿಲ್ಲಿಗೊಳಿಸಿದ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಕವಾಟುಗಳಿಂದ ಹೊರಕ್ಕೆ ಎಸೆಯಲ್ಪಟ್ಟ ಸಾಮಗ್ರಿಗಳ ಅಡಿ ಭಾಗದಲ್ಲಿ ಕಳವಾಗಿದೆ ಎನ್ನಲಾದ ಚಿನ್ನದ ಒಡವೆ ಪತ್ತೆಯಾಯಿತು. ಚಿನ್ನದ ಒಡವೆಗಳು ಪೆಟ್ಟಿಗೆಯಲ್ಲಿರಿಸಲಾಗಿತ್ತು. ಚಿನ್ನದ ಒಡವೆ ಲಭಿಸಿದರೂ, ಮನೆ ಬಾಗಿಲು ಮುರಿದು ಅಕ್ರಮವಾಗಿ ಒಳಪ್ರವೇಶಿಸಿ ಕಳವಿಗೆ ಯತ್ನಿಸಿದ ಪ್ರಕರಣದ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.